ಮದುವೆಗೆ ಚಿನ್ನಾಭರಣ, ವಾಹನದ ಇಎಂಐ ಕಟ್ಟಲು ದರೋಡೆ- ಏಳು ಮಂದಿ ಬಂಧನ

ಮಂಡ್ಯ: ಜಿಲ್ಲೆಯ ಎರಡು ಕ್ರಷರ್ ಪ್ರಕರಣ ಸೇರಿದಂತೆ ಇತರೆಡೆ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಪಾಂಡವಪುರ ತಾಲೂಕಿನ ಹೊನಗಾನಹಳ್ಳಿ ಗ್ರಾಮದ ಎಸ್.ಕೃಷ್ಣ, ಚಿನಕುರುಳಿ ಗ್ರಾಮದ ಸಿ.ಎನ್.ಆಕಾಶ್ ಮತ್ತು ಸಿ.ಎಸ್ ಗುರುಕಿರಣ್, ಮೈಸೂರಿನ ನವಾಜ್, ಆಬೀದ್, ರೋಹನ್ ಮತ್ತು ವಸೀಂ ಬಂಧಿತರು. ಇವರಿಂದ 2.10 ಲಕ್ಷ ರೂ. ನಗದು, 60 ಗ್ರಾಂ ಚಿನ್ನ, 300 ಗ್ರಾಂ ಬೆಳ್ಳಿ, 4 ಸ್ಮಾರ್ಟ್ ಫೋನ್, 4 ಬೈಕ್ ಸೇರಿದಂತೆ ಒಟ್ಟು 9.26 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಏನಿದು ಪ್ರಕರಣ?
ಡಿ. 3ರಂದು ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬೇಬಿ ಬೆಟ್ಟದಲ್ಲಿರುವ ಅಹಲ್ಯದೇವಿ ಕ್ರಷರ್ ಗೆ ನುಗ್ಗಿ ಕಚೇರಿಯ ಸಿಬ್ಬಂದಿಗೆ ಪ್ರಾಣ ಬೆದರಿಕೆ ಹಾಕಿ, 18 ಸಾವಿರ ರೂ. ನಗದು ದೋಚಿ ಈ ಖದೀಮರು ಪರಾರಿಯಾಗಿದ್ದರು. ಅದೇ ದಿನ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಟಿ.ಎಂ ಹೊಸೂರು ಶ್ರೀರಂಗನಾಥ ಸ್ಟೋನ್ ಕ್ರಷರ್ ಗೆ ನುಗ್ಗಿ 4 ಸಾವಿರ ರೂ. ನಗದು ಮತ್ತು 4 ಸ್ಮಾರ್ಟ್ ಫೋನ್ ದೋಚಿದ್ದರು. ಈ ಎರಡು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಅಹಲ್ಯದೇವಿ ಕ್ರಷರ್ ನಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದ ದೃಶ್ಯಾವಳಿಯನ್ನು ಪರಿಶೀಲಿಸಿದರು. ಈ ವೇಳೆ ಬಂಧಿತರ ಪೈಕಿ ಇಬ್ಬರು ಕೆಲ ದಿನದ ಹಿಂದೆ ಸುಮಾರು ಹೊತ್ತು ಸಿಬ್ಬಂದಿಗಳೊಡನೆ ಮಾತನಾಡುತ್ತಿರುವುದು ಗೊತ್ತಾಗಿತ್ತು. ಅಂತೆಯೇ, ಅವರ ಮುಖ ಸ್ಪಷ್ಟವಾಗಿ ಪೊಲೀಸರಿಗೆ ತಿಳಿಯಿತು. ಇದರ ಆಧಾರದ ಮೇಲೆ ಡಿ. 9ರಂದು ಎಸ್.ಕೃಷ್ಣ ಮತ್ತು ಸಿ.ಎನ್ ಆಕಾಶ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಖದೀಮರು ತಪ್ಪೊಪ್ಪಿಕೊಂಡಿದ್ದಾರೆ. ಬಳಿಕ ಉಳಿದ ಆರೋಪಿಗಳನ್ನು ಮೈಸೂರಿನಲ್ಲಿಯೇ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಇದಷ್ಟೇ ಅಲ್ಲದೆ ಡಿ. 6ರಂದು ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಶಂಭೂನಹಳ್ಳಿ ರಸ್ತೆಯಲ್ಲಿ ಬೈಕ್‍ನಲ್ಲಿ ಬರುತ್ತಿದ್ದ ಚಿನಕುರಳಿಯ ವಿನಾಯಕ ಜ್ಯೂವೆಲರಿ ಅಂಗಡಿ ಮಾಲೀಕನನ್ನು ಅಡ್ಡಗಟ್ಟಿ, ಅವರ ಬಳಿಯಿದ್ದ ಹಣ ಹಾಗೂ ಒಡವೆ ಸುಲಿಗೆ ಮಾಡಿರುವುದಾಗಿಯೂ ಬಂಧಿತರು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದರು.

ದರೋಡೆಗೆ ಮುನ್ನ ಸ್ಕೆಚ್:
ಬಂಧಿತರೆಲ್ಲರೂ ಸ್ನೇಹಿತರಾಗಿದ್ದು, ಹಣದ ಸಮಸ್ಯೆ ಬಗೆಹರಿಸಿಕೊಳ್ಳಲು ಕೃತ್ಯ ನಡೆಸಿದ್ದಾರೆ. ಜೊತೆಗೆ ಇವರ ವಿರುದ್ಧ ಈವರೆಗೂ ಯಾವುದೇ ದೂರು ದಾಖಲಾಗಿಲ್ಲ. ಇನ್ನು ಅಹಲ್ಯದೇವಿ ಕ್ರಷರ್ ನಲ್ಲಿ ಹಣ ದೋಚುವುದಕ್ಕೂ ಮುನ್ನ ಖದೀಮರು ಬೈಕ್‍ನಲ್ಲಿ ತೆರಳುತ್ತಿದ್ದ ಚಿನ್ನದ ವ್ಯಾಪಾರಿಯಿಂದ ಹಣ ಕಸಿದುಕೊಳ್ಳುವ ಸ್ಕೆಚ್ ಹಾಕಿದ್ದರು. ಇದು ವಿಫಲವಾದ ಹಿನ್ನೆಲೆಯಲ್ಲಿ ಕ್ರಷರ್ ಗೆ ನುಗ್ಗಲಾಗಿತ್ತು.

ಶ್ರೀರಂಗನಾಥ ಸ್ಟೋನ್ ಕ್ರಷರ್ ನಲ್ಲಿ ಕೃತ್ಯ ನಡೆಸಿದ ಬಳಿಕ ಬಾಬುರಾಯನಕೊಪ್ಪಲು ಬಳಿ ಎಟಿಎಂನಲ್ಲಿ ಹಣ ದೋಚಲು ಪ್ರಯತ್ನಿಸಿ ವಿಫಲರಾಗಿದ್ದರು. ಇನ್ನು ಕಳ್ಳತನಕ್ಕೆಂದು ಹೋಗಿದ್ದ ವೇಳೆ ಫಲ ಸಿಗದ ಹಿನ್ನೆಲೆಯಲ್ಲಿ ಗೊರೂರು ಮತ್ತು ಸಾಲಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದು ಬೈಕ್ ಕಳ್ಳತನ ಮಾಡಿಕೊಂಡು ಬಂದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ಚಿನ್ನಾಭರಣ, ಇಎಂಐಗಾಗಿ ಕೃತ್ಯ:
ಸಿಕ್ಕಿಬಿದ್ದವರ ಪೈಕಿ ಇಬ್ಬರ ಸ್ಥಿತಿ ಏನೋ ಮಾಡಲು ಹೋಗಿ ಮತ್ತೇನೋ ಮಾಡಿದಂತಾಗಿದೆ. ಎಸ್.ಕೃಷ್ಣ ಟಿಪ್ಪರ್ ಖರೀದಿ ಮಾಡಿದ್ದು, ಇಎಂಐ ಕಟ್ಟಲು ಇದ್ದ ಗಡುವು ಮುಗಿದಿತ್ತು. ಇದರಿಂದಾಗಿ ವಾಹನವನ್ನು ಸೀಜ್ ಮಾಡಲಾಗಿತ್ತು. ಇದನ್ನ ಬಿಡಿಸಿಕೊಳ್ಳಲು ಡಿ. 10ರೊಳಗೆ ಹಣ ಕಟ್ಟಬೇಕಿದ್ದ ಕಾರಣ ಕೃತ್ಯದಲ್ಲಿ ಭಾಗಿಯಾಗಿದ್ದನು. ಇತ್ತ ಬಂಧಿತ ನವಾಜ್ ಮದುವೆ ಶಿಕ್ಷಕಿಯೊಂದಿಗೆ ಡಿ. 14ರಂದು ನಿಗದಿಯಾಗಿತ್ತು. ಮದುವೆಗೆಂದು ಚಿನ್ನಾಭರಣ ಮಾಡಿಸಿಕೊಳ್ಳಲು ಈ ಕೃತ್ಯ ಎಸಗಿದ್ದನು. ಆದರೆ, ಮದುವೆಗೆ ಮುನ್ನವೇ ಪೊಲೀಸರು ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Comments

Leave a Reply

Your email address will not be published. Required fields are marked *