ಮಂಡ್ಯದಲ್ಲಿ ಸಿಎಂ, ನೀರಾವರಿ ಸಚಿವರ ಅಣಕು ತಿಥಿ ಕಾರ್ಯಕ್ರಮಕ್ಕೆ ಭಾರೀ ಸಿದ್ಧತೆ!

ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಹರಿಸಿ ಕಾವೇರಿಕೊಳ್ಳದ ರೈತರಿಗೆ ನೀರು ನೀಡದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನೀರಾವರಿ ಸಚಿವ ಎಂಬಿ.ಪಾಟೀಲ್ ಅವರ ಅಣಕು ತಿಥಿ ಕಾರ್ಯವನ್ನು ಮಂಡ್ಯದಲ್ಲಿ ಹಮ್ಮಿಕೊಳ್ಳಲಾಗಿದೆ.

ಜಿಲ್ಲೆಯ ಮದ್ದೂರು ತಾಲ್ಲೂಕಿನ ಮದ್ದೂರಮ್ಮ ಕೆರೆಯಲ್ಲಿ ಆಗಸ್ಟ್ ಒಂದರಂದು ಸಾವಿರಾರು ಜನರಿಗೆ ಅನ್ನಸಂತರ್ಪಣೆ ಮಾಡೋ ಮೂಲಕ ಅಣಕು ತಿಥಿ ಮಾಡಲಾಗುತ್ತಿದೆ. ದೇಶಹಳ್ಳಿ, ವಳಗೆರಹಳ್ಳಿ ಗ್ರಾಮಸ್ಥರು ಮತ್ತು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ತಿಥಿ ಕಾರ್ಯ ನೆರವೇರಿಸುತ್ತಿದ್ದಾರೆ.

ಈಗಾಗಲೇ ತಿಥಿ ಕಾರ್ಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ತಿಥಿ ಕಾರ್ಡ್ ಹರಿಯಬಿಟ್ಟಿದ್ದಾರೆ. ಕಳೆದ 24 ದಿಗಳಿಂದ ಸಾವಿರಾರು ಜನ ರೈತರು, ಹೋರಾಟಗಾರರು ಮದ್ದೂರಮ್ಮ ಕೆರೆಯಲ್ಲಿ ಕುಳಿತು ಕೆರೆಗಳಿಗೆ ನೀರು ತುಂಬಿಸುವಂತೆ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಆದ್ರೆ ಇದಕ್ಕೆ ಸಿದ್ದರಾಮಯ್ಯ ಅವರಾಗಲಿ, ಎಂ ಬಿ ಪಾಟೀಲ್ ಆಗಲಿ ಸ್ಪಂದಿಸಿಲ್ಲ. ಹೀಗಾಗಿ ಭಾನುವಾರ ಅವರಿಬ್ಬರ ಪ್ರತಿಕೃತಿ ದಹಿಸಿ ಅಣಕು ಸಂಸ್ಕಾರ ಮಾಡಲಾಗಿತ್ತು.

ಈ ಹಿನ್ನೆಲೆಯಲ್ಲಿ ನಾಳೆ ಇಬ್ಬರು ಯುವಕರು ಕೇಶಮುಂಡನ ಮಾಡಿಸಿಕೊಂಡು ಸಂಪ್ರದಾಯಬದ್ದವಾಗಿ ತಮ್ಮ ಕಷ್ಟಕ್ಕೆ ಸ್ಪಂದಿಸದ ನಾಯಕರ ತಿಥಿ ಕಾರ್ಯ ನಡೆಸಲಿದ್ದಾರೆ. ಮದ್ದೂರಮ್ಮ ಕೆರೆಯಂಗಳದಲ್ಲಿ ಸಾವಿರಾರು ಜನರಿಗೆ ಅನ್ನಸಂತರ್ಪಣೆ ಮಾಡುವ ಜೊತೆಗೆ, ರಾತ್ರಿಯಿಡೀ ಭಜನೆ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ.

Comments

Leave a Reply

Your email address will not be published. Required fields are marked *