ನಿಶ್ಚಿತಾರ್ಥವಾದ ಯುವತಿಯನ್ನು ಪ್ರೀತಿಸಿ ಮದುವೆಯಾದವ ಇಂದು ಶವವಾಗಿ ಪತ್ತೆ

– ಕತ್ತು ಕುಯ್ದು ದೇಹಕ್ಕೆ ಕಲ್ಲು ಕಟ್ಟಿ ನದಿಗೆ ಎಸೆದ್ರು

ಮಂಡ್ಯ: ಪ್ರೇಯಸಿ ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ನಿಶ್ಚಿತಾರ್ಥವಾಗಿದ್ದ ಯವತಿಯನ್ನು ಮದುವೆಯಾಗಿದ್ದ ಯುವಕನೋರ್ವ ಇಂದು ಹಾಸನ ಜಿಲ್ಲೆ ಹೊಳೆನರಸೀಪುರದ ಹೇಮಾವತಿ ನದಿಯಲ್ಲಿ ಶವವಾಗಿ ಪತ್ತೆಯಾಗಿದೆ.

ಸಾವನ್ನಪ್ಪಿದ ಯುವಕನನ್ನು ಮಂಡ್ಯದ ಸಿದ್ಧಯ್ಯನಕೊಪ್ಪಲು ಗ್ರಾಮದ ನಿವಾಸಿ ಮಂಜು (29) ಎಂದು ಗುರುತಿಸಲಾಗಿದೆ. ಈತ ತನ್ನದೇ ಊರಿನ ಅರ್ಚನಾರಾಣಿ ಎಂಬವರನ್ನು ಪ್ರೀತಿಸಿ ಸೆಪ್ಟೆಂಬರ್ 18 ರಂದು ಯುವತಿಯ ಪೋಷಕರ ವಿರೋಧದ ನಡೆವೆಯೂ ಶಿವಮೊಗ್ಗದ ಶಿಕಾರಿಪುರದಲ್ಲಿ ಮದುವೆ ಮಾಡಿಕೊಂಡಿದ್ದ.

ಮಂಜು ಮತ್ತು ಅರ್ಚನ ಕಳೆದ 7 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ಪ್ರೀತಿಗೆ ಅರ್ಚನ ಕುಟುಂಬದವರು ವಿರೋಧ ಮಾಡುತ್ತಿದ್ದರು. ಹೀಗಾಗಿ ಅರ್ಚನಗೆ ಮದ್ದೂರಿನ ರುದ್ರಾಕ್ಷಿಪುರ ನಿವಾಸಿ ಕಿರಣ್ ಎಂಬ ಯುವಕನ ಜೊತೆ ಬಲವಂತವಾಗಿ ನಿಶ್ಚಿತಾರ್ಥ ಮಾಡಿಸಿದ್ದರು. ನಿಶ್ಚಿತಾರ್ಥದ ಬಳಿಕ ಅದ್ಧೂರಿಯಾಗಿ ಮದುವೆ ಮಾಡಲು ಅಕ್ಟೋಬರ್ 23-24 ರಂದು ಮದುವೆ ದಿನಾಂಕ ನಿಗದಿ ಮಾಡಿದ್ದರು. ಆದರೆ ಮದುವೆ ಇಷ್ಟವಿಲ್ಲದ ಅರ್ಚನ ಮಂಜುಗಾಗಿ ಮನೆಯಿಂದ ಹೊರ ಬಂದಿದ್ದರು.

ಸೆಪ್ಟಂಬರ್ 16 ರಂದು ಊರಿನಿಂದ ಓಡಿಹೋದ ಅರ್ಚನ ಮತ್ತು ಮಂಜು ಸೆಪ್ಟಂಬರ್ 18 ರಂದು ಶಿವಮೊಗ್ಗದ ಶಿಕಾರಿಪುರ ದೇವಸ್ಥಾನದಲ್ಲಿ ಮದುವೆಯಾಗಿ ವಾಪಸ್ ಬಂದು ಮಂಡ್ಯದ ಚಾಮುಂಡೇಶ್ವರಿ ನಗರದಲ್ಲಿ ವಾಸವಿದ್ದರು. ಇದರಿಂದ ಕೋಪಗೊಂಡ ಅರ್ಚನ ಕುಟುಬಂದವರು ಆಸ್ತಿ ಪತ್ರಕ್ಕೆ ಸಹಿ ಹಾಕಿಸಿಕೊಂಡು ಸಂಬಂಧ ಕಡಿದುಕೊಂಡಿದ್ದರು. ಆದರೆ ಮದುವೆ ಫಿಕ್ಸ್ ಆಗಿದ್ದ ಕಿರಣ್, ಭಾವಿ ಪತ್ನಿಯನ್ನ ಮದುವೆಯಾಗಿದ್ದ ಮಂಜು ಮೇಲೆ ದ್ವೇಷ ಸಾಧಿಸುತ್ತಿದ್ದ ಎಂದು ಹೇಳಲಾಗಿದೆ.

ನಡೆದಿದ್ದೇನು?
ನವೆಂಬರ್ 9ರಂದು ಸಂಜೆ ಹಾಲು ತರೋದಾಗಿ ಹೇಳಿ ಹೋದ ಮಂಜು ನಾಪತ್ತೆಯಾಗಿದ್ದ. ಬಳಿಕ ಪತಿ ಕಾಣೆಯಾಗಿದ್ದಾರೆ ಎಂದು ಪತ್ನಿ ಅರ್ಚನ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇಂದು ಹೊಳೆನರಸೀಪುರದ ನದಿಯಲ್ಲಿ ಶವವೊಂದು ಪತ್ತೆಯಾಗಿದೆ ಎಂದು ಹಾಸನ ಪೊಲೀಸರು ಮಂಡ್ಯ ಪೋಲಿಸರಿಗೆ ಮಾಹಿತಿ ನೀಡಿದ್ದರು. ಈ ವೇಳೆ ಪೊಲೀಸರು ಅರ್ಚನರನ್ನು ಸ್ಥಳಕ್ಕೆ ಕರೆದುಕೊಂಡು ಹೋದಾಗ ಎರಡು ಕೈಗಳಲ್ಲಿದ್ದ ಟ್ಯಾಟೂನಿಂದ ಇದು ಮಂಜು ಶವ ಎಂದು ಅರ್ಚನಾ ಗುರುತಿಸಿದ್ದಾರೆ.

ಮಂಜು ಕುತ್ತಿಗೆ ಕುಯ್ದು ಕೊಲೆಮಾಡಿ ದೇಹಕ್ಕೆ ಹಗ್ಗ ಬಿಗಿದು ನೀರಿಗೆ ಎಸೆದ್ದಿದ್ದಾರೆ. ಜೊತೆಗೆ ಮಂಜು ದೇಹ ತೇಲದಂತೆ ಕಲ್ಲು ಕಟ್ಟಿ ನದಿಗೆ ಎಸೆದಿದ್ದಾರೆ. ಈ ವಿಚಾರವಾಗಿ ಅರ್ಚನಾ ಕುಟುಂಬಸ್ಥರ ಮೇಲೆ ಅನುಮಾನ ವ್ಯಕ್ತಪಡಿಸಿದ ಮೃತ ಮಂಜು ಪೋಷಕರು, ಅರ್ಚನಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಕಿರಣ್ ಎಂಬುವನೇ ಮಂಜನನ್ನು ಕೊಲೆ ಮಾಡಿದ್ದಾನೆಂದು ಆರೋಪಿಸಿದ್ದಾರೆ.

Comments

Leave a Reply

Your email address will not be published. Required fields are marked *