ನಿಂತಿದ್ದ ಲಾರಿಗೆ ಸ್ಕೂಟರ್ ಡಿಕ್ಕಿ- ಇಬ್ಬರು ಮಕ್ಕಳು ಸೇರಿದಂತೆ ಮೂವರ ಸಾವು

ಮಂಡ್ಯ: ನಿಂತಿದ್ದ ಲಾರಿಗೆ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಮೂವರು ಮೃತಪಟ್ಟು, ಪುಟ್ಟಮಕ್ಕಳ ತಾಯಿ ಗಂಭೀರ ಸ್ವರೂಪದಲ್ಲಿ ಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಗುಡ್ಡೇನಹಳ್ಳಿ ಕ್ರಾಸ್ ಬಳಿಯ ತುಮಕೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಜರುಗಿದೆ.

ನಾಗಮಂಗಲ ತಾಲೂಕಿನ ಹೊಣಕೆರೆ ಗ್ರಾಮದ ಜೆಡಿಎಸ್ ಮುಖಂಡ ಹಾಗೂ ಮಾಜಿ ತಾ.ಪಂ.ಸದಸ್ಯ ಆನಂದ್ ಕುಮಾರ್(62) ಹಾಗೂ ಮೊಮ್ಮಕ್ಕಳಾದ ಆರಾಧ್ಯ(10) ಹಾಗೂ ಗೌರವ್(5) ಮೃತ ದುರ್ದೈವಿಗಳು. ಘಟನೆಯಲ್ಲಿ ಆನಂದ್‍ಕುಮಾರ್ ಸೊಸೆ ಮೋನಿಕಾ ಗಂಭೀರ ಸ್ವರೂಪರದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಗುಡ್ಡೇನಹಳ್ಳಿ ಸಮೀಪದ ತೋಟದ ಮನೆಯಿಂದ ಸ್ವಗ್ರಾಮ ಹೊಣಕೆರೆಗೆ ತಮ್ಮ ಇಬ್ಬರು ಮೊಮ್ಮಕ್ಕಳು ಹಾಗೂ ಸೊಸೆಯೊಂದಿಗೆ ತಮ್ಮ ಹೋಂಡಾ ಆಕ್ಟಿವಾ ಸ್ಕೂಟರ್‍ನಲ್ಲಿ ರಾತ್ರಿ 8.40ರ ವೇಳೆಯಲ್ಲಿ ತೆರಳುತ್ತಿದ್ದ ವೇಳೆ ರಸ್ತೆಬದಿಯಲ್ಲಿ ನಿಂತಿದ್ದ ಲಾರಿಯೊಂದಕ್ಕೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.

ಡಿಕ್ಕಿಯ ರಭಸಕ್ಕೆ ಆನಂದ್ ಕುಮಾರ್ ಚಾಲನೆ ಮಾಡುತ್ತಿದ್ದ ಸ್ಕೂಟರ್, ಲಾರಿ ಮುಂಭಾಗಕ್ಕೆ ಅಪ್ಪಳಿಸಿ ಸಿಲುಕಿಕೊಂಡ ಪರಿಣಾಮ ಮೊಮ್ಮಗಳು ಆರಾಧ್ಯ ಸ್ಥಳದಲ್ಲೇ ಕೊನೆಯುಸಿರೆಳೆದರೆ, 5ವರ್ಷದ ಮೊಮ್ಮಗ ಗೌರವ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಪ್ರಾಣಬಿಟ್ಟಿದ್ದಾನೆ. ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದ ಆನಂದ್ ಕುಮಾರ್ ಮತ್ತು ಸೊಸೆ ಮೊನಿಕಾಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗೆಂದು ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಆನಂದ್‍ಕುಮಾರ್ ಮೃತಪಟ್ಟಿದ್ದಾರೆ.

ಸೊಸೆ ಮೋನಿಕಾ ಸಾವು-ಬದುಕಿನ ನಡುವೆ ಬಿಜಿ ನಗರದ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ಜರುಗಿದೆ. ಇದನ್ನೂ ಓದಿ: ಶಾಸಕ ಸಾ.ರಾ ಮಹೇಶ್‍ಗೆ ಮತ್ತೆ ಭೂಕಂಟಕ?

Comments

Leave a Reply

Your email address will not be published. Required fields are marked *