ಕೆಆರ್‌ಎಸ್‌ನಲ್ಲಿ ಹೆಚ್ಚಿರುವ ಟೋಲ್, ಪಾರ್ಕಿಂಗ್ ದರ – ಪ್ರವಾಸಿಗರ ಆಕ್ರೋಶ

ಮಂಡ್ಯ: ಹಳೆ ಮೈಸೂರು ಭಾಗದಲ್ಲಿ ಪ್ರಮುಖ ಪ್ರವಾಸಿ ಸ್ಥಳದಲ್ಲಿ ಒಂದಾದ  ಕೆಆರ್‌ಎಸ್‌ ಅಣೆಕಟ್ಟೆಯ ಬೃಂದಾವನಕ್ಕೆ ಪ್ರತಿ ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಪ್ರವಾಸಕ್ಕೆಂದು ಆಗಮಿಸುವ ಪ್ರವಾಸಿಗರಿಗೆ ಮಾತ್ರವಲ್ಲದೇ ಸ್ಥಳೀಯರಿಗೂ ಇದೀಗ ಒಂದು ಕಿರಿಕಿರಿ ಎದುರಾಗಿದೆ.

ಪ್ರತಿ ನಿತ್ಯವೂ ಕೆಆರ್‌ಎಸ್‌ಗೆ ಸಾವಿರಾರು ಮಂದಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಇದರಿಂದ ಕಾವೇರಿ ನೀರಾವರಿ ನಿಗಮಕ್ಕೆ ಮತ್ತು ಪ್ರವಾಸೋದ್ಯಮ ಇಲಾಖೆಗೆ ಸಾಕಷ್ಟು ಹಣ ಹರಿದು ಬರುತ್ತಿದೆ. ಇದೀಗ ಟೋಲ್ ಮೂಲಕ ಪ್ರವಾಸಿಗರಲ್ಲಿ ಮತ್ತು ಸ್ಥಳೀಯರಲ್ಲಿ ಮತ್ತಷ್ಟು ಹಣ ವಸೂಲಿ ಮಾಡಲು ಕಾವೇರಿ ನೀರಾವರಿ ನಿಗಮಕ್ಕೆ ಮತ್ತು ಪ್ರವಾಸೋದ್ಯಮ ಇಲಾಖೆ ಮುಂದಾಗಿರುವುದು ಪ್ರವಾಸಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಬೃಂದಾವನಕ್ಕೆ ಹೋಗುವ ವಾಹನಗಳ ಶುಲ್ಕ
ತ್ರಿಚಕ್ರ ವಾಹನ – 40 ರೂ.
ಕಾರು – 100 ರೂ.
ಮಿನಿ ಬಸ್ – 140 ರೂ.
ಬಸ್ – 200 ರೂ

ಸೇತುವೆ ಮೇಲೆ ಹೋಗುವ ವಾಹನಗಳ ಶುಲ್ಕ
ತ್ರಿಚಕ್ರ ವಾಹನ – 20 ರೂ.
ಕಾರು – 50 ರೂ.
ಮಿನಿ ಬಸ್ – 70 ರೂ.
ಬಸ್ – 100 ರೂ.
ಲಾರಿ – 200 ರೂ.

ಪಾರ್ಕಿಂಗ್ ಗೆ ಮಾತ್ರವಲ್ಲದೇ ಕೆಆರ್‌ಎಸ್‌ ಅಣೆಕಟ್ಟೆ ಎದುರು ಇರುವ ಸೇತುವೆಯ ಮೇಲೆ ಹೋಗಲು ಸಹ ಹಣವನ್ನು ನಿಗದಿ ಮಾಡಲಾಗಿದೆ. ಈ ಹಿಂದೆ ಬೃಂದಾವನಕ್ಕೆ ಹೋಗುವ ಕಾರುಗಳಿಗೆ ಪಾರ್ಕಿಂಗ್ ಸೇರಿ 50 ರೂಪಾಯಿಯನ್ನು ಪಡೆಯಲಾಗುತಿತ್ತು ಮತ್ತು ಸೇತುವೆಯ ಮೇಲೆ ಹೋಗುವ ವಾಹನಗಳಿಂದ ಹಣ ಪಡೆಯುತ್ತಿರಲಿಲ್ಲ. ಆದರೆ ಈಗ ಸೇತುವೆಯ ಮೇಲೆ ಹೋಗುವ ಕಾರುಗಳಿಗೆ 50 ರೂ., ಬೃಂದಾವನಕ್ಕೆ ಹೋಗುವ ಕಾರುಗಳಿಗೆ 100 ರೂ. ನಿಗದಿ ಮಾಡಲಾಗಿದೆ. ಇದಲ್ಲದೇ ಬೃಂದಾವನದ ಒಳಗೆ ಹೋಗುವ ಟಿಕೆಟ್ ದರವನ್ನು 50 ರೂ.ಗೆ ಏರಿಕೆ ಮಾಡಲಾಗಿದೆ. ಈ ಎಲ್ಲಾ ಹಣವನ್ನು ವಸೂಲಿ ಮಾಡುವ ಟೆಂಡರ್ ಅನ್ನು ಕೆಸಿಐಸಿ ಪ್ರವೈಟ್ ಲಿಮಿಟೆಡ್‍ಗೆ 13 ಕೋಟಿ ರೂಪಾಯಿಗೆ ನೀಡಲಾಗಿದೆ.

ಪ್ರವಾಸಿಗರನ್ನು ತನ್ನತ್ತ ಆಕರ್ಷಣೆ ಮಾಡುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಹೊಸ ಯೋಜನೆಗಳನ್ನು ಜಾರಿಗೆ ತರುವ ಬದಲು ಈ ರೀತಿ ಟೋಲ್ ಹಾಗೂ ಪಾರ್ಕಿಂಗ್ ಶುಲ್ಕವನ್ನು ಹೆಚ್ಚಿಸಿರೋದು ಎಲ್ಲರ ಆಕ್ರೋಶಕ್ಕೆ ಗುರಿಯಾಗಿದೆ. ಈಗಲಾದರೂ ಈ ಶುಲ್ಕಗಳನ್ನು ಕಡಿಮೆಗೊಳಿಸಿ ಎಲ್ಲರಿಗೂ ಅನುಕೂಲವಾಗುವ ಕೆಲಸವನ್ನು ಪ್ರವಾಸೋದ್ಯಮ ಇಲಾಖೆ ಮಾಡಬೇಕಿದೆ ಎಂದು ಪ್ರವಾಸಿಗರು ನೋವನ್ನು ತೋಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *