ಮಂಡ್ಯ: ಮುಸ್ಲಿಂ ಯುವಕರನ್ನು ಬಂಧನ ಮಾಡಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಿರುವುದನ್ನು ಖಂಡಿಸಿ ಇಂದು ಹಿಂದೂ ಪರ ಮತ್ತು ಕನ್ನಡ ಪರ ಸಂಘಟನೆಗಳು ಕೆಆರ್‌ಪೇಟೆ ಬಂದ್‍ಗೆ ಕರೆ ನೀಡಿದ್ದು, ಇತ್ತ ಶಾಲಾ-ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ.
ಅಕ್ಟೋಬರ್ 27 ರಂದು ಮಂಡ್ಯ ಜಿಲ್ಲೆಯ ಕೆಆರ್‌ಪೇಟೆ ತಾಲೂಕಿನ ಆಲಂಬಾಡಿಕಾವಲು ಬಳಿ ಮುಸ್ಲಿಂ ಯುವಕರು ಅನುಮಾನಾಸ್ಪದವಾಗಿ ಪರೇಡ್ ನಡೆಸಿದರು. ಈ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿ 16 ಮಂದಿ ಮುಸ್ಲಿಂ ಯುವಕರನ್ನು ಬಂಧಿಸಿದ್ದರು. ನಂತರ ಅವರು ಪಾಪ್ಯುಲ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‍ಐ) ಸಂಘಟನೆಯ ಕಾರ್ಯಕರ್ತರು ಎಂದು ತಿಳಿದು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

ಇದನ್ನು ಖಂಡಿಸಿ ಇಂದು ಕೆಆರ್‌ಪೇಟೆ ಬಂದ್‍ಗೆ ಸಂಘಟನೆಗಳು ಕರೆ ನೀಡಿವೆ. ಮೂರು ದಿನಗಳ ಹಿಂದೆ ಬಂಧನ ಮಾಡಿ ಬಿಡುಗಡೆ ಮಾಡಿರುವ ಯುವಕರು ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸಿದ್ದರು. ಆದರೂ ಪೊಲೀಸರು ಯಾರೋದ್ದೋ ಒತ್ತಡಕ್ಕೆ ಮಣಿದು ಯುವಕರನ್ನು ಬಿಡುಗಡೆಗೊಳಿಸಿದ್ದಾರೆ. ಹೀಗಾಗಿ ಬಿಡುಗಡೆ ಮಾಡಿರುವ ಯುವಕರನ್ನು ಬಂಧಿಸಿ, ಕೆಆರ್‌ಪೇಟೆ ಭಾಗದಲ್ಲಿ ನಡೆಯುತ್ತಿರುವ ದೇಶ ವಿರೋಧಿ ಚಟುವಟಿಕೆಗಳಿಗೆ ಬ್ರೇಕ್ ಹಾಕಬೇಕೆಂದು ಸಂಘಟನೆಗಳು ಆಗ್ರಹಿಸಿವೆ.
ಈ ಪ್ರತಿಭಟನೆ ಹಲವು ಮಠಗಳ ಮಠಾಧೀಶರುಗಳು ಪಾಲ್ಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಜರುಗದಂತೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಅಲ್ಲದೆ ಮುನ್ನಚ್ಚೆರಿಕಾ ಕ್ರಮವಾಗಿ ಕೆಆರ್‌ಪೇಟೆ ತಹಶೀಲ್ದಾರ್ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಅದೇಶ ಹೊರಡಿಸಿದ್ದಾರೆ.


Leave a Reply