ಬಾಯಾರಿದ ಜೋಡೆತ್ತುಗಳಿಗೆ ರೈತನಿಂದ ಬಾಟಲಿ ನೀರು!

ಮಂಡ್ಯ: ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದ್ದು, ಮಂಡ್ಯದಲ್ಲಿ ಜನಸಾಗರವೇ ಹರಿದುಬಂದಿದೆ.

ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ಮೆರವಣಿಗೆಯಲ್ಲಿ ಕಿಕ್ಕಿರಿದ ಜನರ ಮಧ್ಯೆ ಜೋಡೆತ್ತುಗಳು ಸಾಗಿದ್ದವು. ಸುಡುಬಿಸಿಲಿನಿಂದಾಗಿ ದಣಿದು ಬಾಯಾರಿದ್ದ ಜೋಡೆತ್ತುಗಳಿಗೆ ರೈತ ಬಾಟಲಿ ನೀರು ಕುಡಿಸಿರುವುದು ನೆರೆದಿದ್ದ ಜನರ ಗಮನಸೆಳೆಯಿತು.

ನಿಖಿಲ್ ಅವರು ತಾವು ನಾಮಪತ್ರ ಸಲ್ಲಿಸುವುದಕ್ಕೂ ಮೊದಲು ನಗರದ ಕಾಳಿಕಾಂಬ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಕಾಳಿಕಾಂಬ ದೇವಸ್ಥಾನದ ಆವರಣದಿಂದ ರ‍್ಯಾಲಿ ಪ್ರಾರಂಭಿಸಿದ್ದು, ಡೊಳ್ಳು ಕುಣಿತ, ಪಟ ಕುಣಿತ, ಗೊಂಬೆ ಕುಣಿತಗಳ ಜೊತೆ ನಿಖಿಲ್ ಪ್ರಚಾರ ಕೈಗೊಳ್ಳಲಾಗಿದೆ.

ಸುಮಾರು ಎರಡು ಕಿಲೋ ಮೀಟರ್ ರ್ಯಾಲಿ ಹೋಗಲಿದ್ದು, ನಿಖಿಲ್ ಕುಮಾರಸ್ವಾಮಿ ಅವರು ತೆರೆದ ವಾಹನದಲ್ಲಿ ನಿಂತು ಅವರನ್ನು ಹಿಂಬಾಲಿಸುತ್ತಿರುವ ಜನರಿಗಾಗಿ ಕೈ ಬೀಸುತ್ತಿದ್ದಾರೆ. ನಿಖಿಲ್ ತೆರೆದ ವಾಹನ ಹಿಂದೆ, ಮುಂದೆ ಮತ್ತು ಅಕ್ಕ-ಪಕ್ಕದಲ್ಲಿ ಕಿಕ್ಕಿರಿದ್ದಷ್ಟು ಜನರು ಸಾಗರದಂತೆ ಬಂದಿದ್ದಾರೆ. ಎತ್ತ ನೋಡಿದರೂ ಬರೀ ಜನರೆ ಕಾಣಿಸುತ್ತಿದ್ದಾರೆ. ಬಿಸಿಲು ಎಂದು ನೋಡದೆ ಜನರು ನಿಖಿಲ್ ಎಂದು ಕೂಗುತ್ತಾ ಒಂದು ರೀತಿ ಮಂಡ್ಯದಲ್ಲಿ ಹಬ್ಬದ ವಾತಾವರಣವೇ ಸೃಷ್ಟಿಯಾಗಿದೆ.

ಎರಡು ಲಾರಿಯಲ್ಲಿ ರ‍್ಯಾಲಿ:
ರ್ಯಾಲಿಗಾಗಿ ಎರಡು ಲಾರಿ ಸಿದ್ಧತೆ ಮಾಡಿಕೊಂಡಿದ್ದು, ಜೆಡಿಎಸ್ ಬ್ಯಾನರ್‍ನಿಂದ ಅಲಂಕಾರ ಮಾಡಲಾಗಿದೆ. ಲಾರಿ ಸುತ್ತ ಹಾಕಿರುವ ಬ್ಯಾನರ್‍ನಲ್ಲಿ ನಿಖಿಲ್ ಕುಮಾರ್ ರಾರಾಜಿಸುತ್ತಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಮುಖಂಡರ ಫೋಟೋ ಕೂಡ ಇದೆ. ಜೊತೆಗೆ ಉಳುವ ಯೋಗಿಯ ನೋಡಲ್ಲಿ ಹಾಡಿಗೆ ಹಸಿರು ಸೀರೆ ಉಟ್ಟು, ಹೊರೆ ಹೊತ್ತ ಮಹಿಳೆಯರಿಂದ ನೃತ್ಯದ ಮೂಲಕ ಮನರಂಜನೆ ನೀಡಲಾಗುತ್ತಿದೆ.

ಭದ್ರತೆ:
ಭದ್ರತೆಗಾಗಿ ಒಬ್ಬರು ಎಸ್‍ಪಿ, 10 ಡಿವೈಎಸ್‍ಪಿ, 20 ಸಿಪಿಐ, 35 ಪಿಎಸ್‍ಐ, 800 ಜನ ಸಿಬ್ಬಂದಿ, 5 ಡಿಆರ್ ಸಿಬ್ಬಂದಿ ಮತ್ತು 5 ಕೆಎಸ್‍ಆರ್‍ಪಿ ನಿಯೋಜನೆ ಮಾಡಲಾಗಿದೆ. ನಿಖಿಲ್ ನಾಮಪತ್ರ ಸಲ್ಲಿಕೆ ನಂತರ ಕಾವೇರಿ ಉದ್ಯಾನವನದ ಬಳಿ ಬೃಹತ್ ಬಹಿರಂಗ ಭಾಷಣ ಮಾಡಲಿದ್ದಾರೆ. ಬಹಿರಂಗ ಭಾಷಣ ವೀಕ್ಷಿಸಲು ಬೃಹತ್ ಎಲ್‍ಇಡಿ ಪರದೆ ಅಳವಡಿಕೆ ಮಾಡಲಾಗಿದೆ. ಸುಮಾರು ಹತ್ತು ಎಲ್‍ಇಡಿ ಅಳವಡಿಕೆ ಮಾಡಲಾಗಿದ್ದು, ಪಾರ್ಕ್ ಸುತ್ತ ಬ್ಯಾರಿಕೇಡ್ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ.

Comments

Leave a Reply

Your email address will not be published. Required fields are marked *