ಯಾವ ಸರ್ವೆ, ದೇವಾಲಯ ಸುತ್ತಿದ್ರೂ ಇವಿಎಂ ಫಲಿತಾಂಶ ಬದಲಾವಣೆಯಾಗಲ್ಲ – ಅಭಿಷೇಕ್

ಮಂಡ್ಯ: ಯಾವ ಸರ್ವೆ ಮಾಡಿಸಿದರು, ಎಷ್ಟು ದೇವಾಲಯಗಳನ್ನು ಸುತ್ತಿದರೂ ಫಲಿತಾಂಶ ಬದಲಾವಣೆಯಾಗುವುದಿಲ್ಲ. ಫಲಿತಾಂಶ ಏನಿದ್ದರೂ ಮತಯಂತ್ರದಲ್ಲಿ ಅಡಗಿದೆ ಅದು ಮೇ 23ಕ್ಕೆ ಹೊರಬೀಳಲಿದೆ ಎಂದು ಪರೋಕ್ಷವಾಗಿ ಸಿಎಂ ಎಚ್ಡಿಕೆ ಕುಟುಂಬಕ್ಕೆ ಅಭಿಷೇಕ್ ಅಂಬರೀಶ್ ಟಾಂಗ್ ನೀಡಿದ್ದಾರೆ.

ಅಭಿಮಾನಿಯೊಬ್ಬರ ಕೋರಿಕೆ ಮೇರೆಗೆ ಮಂಡ್ಯದಲ್ಲಿ ಕಾರ್ಯಕ್ರಮವೊಂದಕ್ಕೆ ಬಂದಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡಿ ಮೇ ತಿಂಗಳು ನಮ್ಮ ಕುಟುಂಬಕ್ಕೆ ತುಂಬ ವಿಶೇಷವಾದದ್ದು ಎಂದು ಹೇಳಿದ್ದಾರೆ.

ಮೇ 23 ರಂದು ಅಮ್ಮ ಸುಮಲತಾ ಅವರು ಸ್ಪರ್ಧೆ ಮಾಡಿರುವ ಲೋಕಸಭಾ ಚುನಾವಣೆಯ ಫಲಿತಾಂಶ ಹೊರ ಬೀಳಲಿದೆ. ಇದೇ ಮೇ 29ಕ್ಕೆ ಅಪ್ಪನ ಹುಟ್ಟು ಹಬ್ಬ ಇದೆ. ಈ ತಿಂಗಳು ನನ್ನ ಅಮರ್ ಸಿನಿಮಾ ಬಿಡುಗಡೆಯಾಗಲಿದೆ ಇದ್ದರಿಂದ ಈ ತಿಂಗಳು ನಮ್ಮ ಕುಟುಂಬಕ್ಕೆ ಬಹಳ ವಿಶೇಷವಾದದ್ದು. ನಮ್ಮ ಪ್ರೀತಿ ಮಾಡುವ ಜನರು ಪ್ರೀತಿಯಿಂದ ಟೀ, ಕಾಫಿಗೆ ಕರೆಯುತ್ತಾರೆ ಅದಕ್ಕೆ ಮಂಡ್ಯಕ್ಕೆ ಬರುತ್ತಿರುತ್ತೇನೆ. ಕಳೆದ ಕೆಲವು ದಿನಗಳಿಂದ ಸಿನಿಮಾ ಕೆಲಸದಲ್ಲಿ ಬ್ಯುಸಿ ಇದ್ದ ಕಾರಣ ಬಂದಿರಲಿಲ್ಲ ಎಂದು ಹೇಳಿದರು.

ಇದೇ ವೇಳೆ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಿದ ಅಭಿಷೇಕ್, ಅವರು ಹೊಸ ಸಿನಿಮಾ ಮಾಡುತ್ತಾರೆ ಅಂತಾ ಕೇಳಲ್ಪಟ್ಟೆ. ಅವರಿಗೆ ಗುಡ್ ಲಕ್ ಎಂದು ಹೇಳಿದರು.

ನನ್ನ ಅಮರ್ ಸಿನಿಮಾಗಿಂತ ಮೇ 23ರ ಲೋಕಸಭಾ ಚುನಾವಣೆಯ ಫಲಿತಾಂಶದ ಬಗ್ಗೆಯೇ ನನಗೆ ಜಾಸ್ತಿ ಕುತೂಹಲ ಇದೆ. ನಾವು ಯಾವ ಸರ್ವೆಗಳನ್ನು ಮಾಡಿಸಿಲ್ಲ ನಮಗೆ ಮತದಾನ ನಡೆದ ದಿನವೇ ಫಲಿತಾಂಶ ಗೊತ್ತಾಗಿದೆ. ಅದು ಮೇ 23 ರಂದು ಪ್ರಕಟವಾಗಬೇಕಿದೆ. ಅಪ್ಪನ ಕನಸಾದ ಜೆಪಿ ನಗರದ ಮನೆ ನಿರ್ಮಾಣದ ಕಾರ್ಯ ನಡೆಯುತ್ತಿದೆ. ಬಳಿಕ ಮಂಡ್ಯದಲ್ಲಿ ಮನೆ ಕಟ್ಟುವ ಪ್ರಕ್ರಿಯೆ ಶುರುಮಾಡಲಿದ್ದೇವೆ.

ಫಲಿತಾಂಶದ ಬಗ್ಗೆ ಟೆನ್ಷನ್ ಇದೆಯಾ ಎಂಬ ಮಾಧ್ಯಮದವರ ಪ್ರಶ್ನೆಗೆ, ನೋ ವೇ ಚಾನ್ಸೇ ಇಲ್ಲ ಎಂದು ಅಂಬರೀಷ್ ಅವರ ಡೈಲಾಗ್ ಹೊಡೆದರು.

Comments

Leave a Reply

Your email address will not be published. Required fields are marked *