ತೊಂದರೆ ನೀಡಿ ಒತ್ತಡ ಹಾಕಿದ್ದರಿಂದ ನಿಷ್ಠಾವಂತ ಡಿಸಿ ವರ್ಗಾವಣೆ: ಸುಮಲತಾ ಅಂಬರೀಶ್

ಮಂಡ್ಯ: ನಿಷ್ಠಾವಂತ ಡಿಸಿಯಾಗಿದ್ದ ಮಂಜುಶ್ರೀ ಅವರಿಗೆ ತೊಂದರೆ ಕೊಟ್ಟು, ಒತ್ತಡ ಹಾಕಿ ಕೆಲಸ ಮಾಡಿಸಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೇಳಿದ್ದಾರೆ.

ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮೊದಲು ನಾನು ಹೇಳಿದ್ದನ್ನೆಲ್ಲಾ ಆರೋಪ ಎಂದು ಹೇಳುತ್ತಿದ್ದರು. ಇದೀಗ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ. ನನ್ನ ಮಾತಲ್ಲಿ ನಿಜ ಇದ್ದ ಕಾರಣ ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸಿ ಅವರನ್ನು ವರ್ಗಾ ಮಾಡಿದ್ದಾರೆ. ನನಗೆ ಸಿಆರ್‍ಪಿಎಫ್ ಭದ್ರತೆ ಬೇಕು ಎಂದು ಕೇಳಿದ್ದೇನೆ ಅಂದ್ರು.

ಇದೇ ವೇಳೆ ಅಂಗವಿಕಲ ಹೆಣ್ಣು ಮಗಳು ಕಷ್ಟಪಟ್ಟು ಐಎಎಸ್ ಮಾಡಿ ನಿಷ್ಠಾವಂತಳಾಗಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಒಬ್ಬಳು ಹೆಣ್ಣು ಮಗಳ ಕಷ್ಟವನ್ನು ಅರ್ಥ ಮಾಡಿಕೊಳ್ಳದೇ ಅವರನ್ನು ಇಲ್ಲಿಂದ ಓಡಿಸಿದ್ದಾರೆ ಎನ್ನುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಸುಮಲತಾ, ಈ ಮಾತಲ್ಲಿ ಅರ್ಥವೇ ಇಲ್ಲ. ಯಾಕಂದ್ರೆ ಅಂಥವರಿಗೆ ಮೊದಲು ತೊಂದರೆ ಕೊಟ್ಟು, ಒತ್ತಡ ಹೇರಿದ್ದಾರೆ. ಹೀಗಾಗಿ ಸರ್ಕಾರದ ವಿಷಯದಲ್ಲಿ ಆ ಮಾತುಗಳನ್ನು ಆಡಲೇ ಬಾರದು ಅಂದ್ರು.

ಸಿದ್ದರಾಮಯ್ಯಗೆ ಟಾಂಗ್:
ಪಕ್ಷೇತರ ಅಭ್ಯರ್ಥಿ ಸುಮಲತಾರನ್ನು ಸೋಲಿಸಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಟಾಂಗ್ ಕೊಟ್ಟ ಸುಮಲತಾ, ಕಾವೇರಿ ನೀರಿಗಾಗಿ ದೇವೇಗೌಡರು ಮಾತ್ರ ಹೋರಾಟ ಮಾಡಿಲ್ಲ. ನನ್ನ ಗಂಡ ಕೂಡ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಕಾವೇರಿ ನೀರಿಗಾಗಿ ರಾಜೀನಾಮೆ ಕೊಟ್ಟ ಏಕೈಕ ವ್ಯಕ್ತಿ ಅಂಬರೀಶ್ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.

ಮಾಯಾಂಗನೆ ಹೇಳಿಕೆಗೆ ಪ್ರತಿಕ್ರಿಯೆ:
ಇದೇ ವೇಳೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದಿವಂಗತ ಜಯಲಲಿತಾ ಅವರನ್ನು ಮೀರಿಸುವ ಮಾಯಾಂಗನೆಯಾಗಿ ಹೋರಾಟ ಮಾಡುತ್ತಿದ್ದಾರೆ ಸಂಸದ ಶಿವರಾಮೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಸುಮಲತಾ, ಜೆಡಿಎಸ್ ನಲ್ಲಿ ಯಾರು ತಾನೆ ಒಳ್ಳೆಯ ಮಾತನ್ನಾಡುತ್ತಾರೆ. ಅವರ ಹೇಳಿಕೆಗೆ ನಾನು ಬೆಲೆ ಕೊಡಲ್ಲ. ಜನ ಕೂಡ ಅವರ ಮಾತಿಗೆ ಬೆಲೆ ಕೋಡೋದಿಕ್ಕೆ ಸಾಧ್ಯನೇ ಇಲ್ಲ. ಹೀಗಾಗಿ ಅವರ ಮಾತಿಗೆ ನಾನೇನು ತಲೆಕೆಡಿಸಿಕೋಳ್ಳೋದಕ್ಕೆ ಹೋಗಲ್ಲ ಎಂದರು.

Comments

Leave a Reply

Your email address will not be published. Required fields are marked *