ಕೈಲಾಸ ಮಾನಸ ಸರೋವರ ಯಾತ್ರಾರ್ಥಿಗಳ ರಕ್ಷಣೆ – ಮೂರ್ನಾಲ್ಕು ದಿನಗಳಲ್ಲಿ ಸ್ಥಳಾಂತರ

ಬೆಂಗಳೂರು: ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡಿದ್ದ ಕರ್ನಾಟಕದ 290 ಯಾತ್ರಾರ್ಥಿಗಳೂ ಸೇರಿದಂತೆ, ದೇಶದ 1500 ಯಾತ್ರಾರ್ಥಿಗಳಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ವಿಪರೀತ ಮಳೆ ಹಾಗೂ ಹವಾಮಾನ ವೈಪರಿತ್ಯದಿಂದ ಕಾರ್ಯಾಚರಣೆ ವಿಳಂಬವಾಗಿದ್ದು, ರಸ್ತೆ ಅಪಘಾತದಲ್ಲಿ 5 ಮಂದಿ ಸೇರಿದಂತೆ, ಒಟ್ಟು 7 ಮಂದಿ ಸಾವನ್ನಪ್ಪಿದ್ದಾರೆ. ಒಂದು ವೇಳೆ ಹವಾಮಾನ ಸುಧಾರಿಸಿದ್ರೆ ಇನ್ನು ಮೂರ್ನಾಲ್ಕು ದಿನಗಳಲ್ಲಿ ಎಲ್ಲರನ್ನೂ ಸ್ಥಳಾಂತರ ಮಾಡಲಾಗುತ್ತದೆ ಎಂದು ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ.

ಹಿಲ್ಸಾದಲ್ಲಿ 550 ಮಂದಿ, ಸಿಮಿಕೋಟ್‍ನಲ್ಲಿ 525 ಮಂದಿ, ಟಿಬೆಟ್ ಭಾಗದಲ್ಲಿ 500 ಮಂದಿ ಸೇರಿ ಒಟ್ಟು 1,575 ಮಂದಿ ಭಾರತೀಯ ಪ್ರವಾಸಿಗರು ಸಂಕಷ್ಟದಲ್ಲಿದ್ದರು. ಇತ್ತ ನೇಪಾಳ್‍ಗಂಜ್‍ನಿಂದ 104 ಮಂದಿ ಪ್ರವಾಸಿಗರನ್ನು 7 ಕಮರ್ಷಿಯಲ್ ವಿಮಾನಗಳ ಮೂಲಕ ಸಿಮಿಕೋಟ್‍ಗೆ ಸ್ಥಳಾಂತರಿಸಲಾಗಿದೆ.

ಸಿಮಿಕೋಟ್‍ನಿಂದ ಉತ್ತರ ಪ್ರದೇಶ ರಾಜಧಾನಿ ಲಕ್ನೋಗೆ ರಸ್ತೆ ಮಾರ್ಗ ಮೂಲಕ ಮೂರು ಗಂಟೆಗಳಲ್ಲಿ ತಲುಪಬಹುದಾಗಿದೆ. ಸಿಲುಕಿರುವ ಯಾತ್ರಾರ್ಥಿಗಳಿಗೆ ವೈದ್ಯಕೀಯ ಸೇರಿದಂತೆ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಅಗತ್ಯಬಿದ್ರೆ ನೇಪಾಳ ನೌಕಾ ಸೇನೆ ಹೆಲಿಕಾಪ್ಟರ್‍ಗಳ ಬಳಕೆಗೆ ಬಾರತೀಯ ರಾಯಭಾರ ಕಚೇರಿ ನಿರ್ಧರಿಸಿದೆ. ನೇಪಾಳ್‍ಗಂಜ್‍ಗೆ ರಾಯಭಾರ ಕಚೇರಿ ನಾಲ್ವರು ಸದಸ್ಯರ ತಂಡವನ್ನು ಕಳುಹಿಸಿಕೊಟ್ಟಿದ್ದು ಪರಿಹಾರ ಕಾರ್ಯಕ್ಕೆ ನೆರವಾಗಲಿದೆ.

ಕನ್ನಡಿಗರೆಲ್ಲರೂ ನೇಪಾಳದ ಸಿಮಿಕೋಟ್‍ನಲ್ಲಿದ್ದು, ರಸ್ತೆ ಮಾರ್ಗವಾಗಿ ಕಠ್ಮಂಡು ಸೇರಿದಂತೆ ವಿವಿಧ ಪ್ರದೇಶಗಳಿಗೆ ಕರೆ ತರುವ ಯತ್ನ ನಡೆದಿದೆ. ಸಿಮಿಕೋಟ್‍ನಲ್ಲಿ ಆಹಾರ, ನೀರು ಮತ್ತು ಔಷಧದ ವ್ಯವಸ್ಥೆ ಮಾಡಲಾಗಿದೆ. ಇನ್ನು ಎರಡು ದಿನ ಮಳೆ ಬರುವ ಸಾಧ್ಯತೆ ಇದೆ ಅಂತ ನೇಪಾಳದ ಹಂಗಾಮಿ ರಾಯಭಾರಿ ಭರತಕುಮಾರ್ ರಿಗ್ಮಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

ಈ ಯಾತ್ರಾರ್ಥಿಗಳ ಸಂಪರ್ಕ ಸಂಬಂಧ ಫೋನ್ ನಂಬರ್: +977-98236 72371ಗೆ ಕರೆ ಮಾಡಬಹುದು ಎಂದು ತಿಳಿಸಲಾಗಿದೆ. ಇನ್ನು, ಯಾತ್ರಾರ್ಥಿಗಳ ಕುಟುಂಬಸ್ಥರು ಇನ್ನೂ ಕೂಡ ಆತಂಕದಲ್ಲಿದ್ದು, ಕುಟುಂಬಸ್ಥರನ್ನು ಸಂಪರ್ಕಿಸಲು ಪರದಾಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *