ಬಸ್ ನಿಲ್ದಾಣದಲ್ಲಿ ಸಿಕ್ಕ 40 ಸಾವಿರದಲ್ಲಿ ಕೇವಲ 7 ರೂ. ತೆಗೆದುಕೊಂಡ!

ಪುಣೆ: ಪುಕ್ಕಟೆಯಾಗಿ ಹಣ ಸಿಕ್ಕರೆ ಯಾರಿಗೆ ತಾನೇ ಬೇಡ. ಬಸ್ಸಿನಲ್ಲಿ, ರಿಕ್ಷಾದಲ್ಲಿ ಸಿಕ್ಕಿದ ಹಣ, ಒಡವೆಗಳನ್ನು ವಾಪಸ್ ಮಾಲೀಕರಿಗೆ ನೀಡಿ ಪ್ರಾಮಾಣಿಕತೆ ಮೆರೆದಿರುವ ಅನೇಕ ಘಟನೆಗಳು ನಮ್ಮ ಕಣ್ಣ ಮುಂದಿವೆ. ಇದೀಗ ಈ ಘಟನೆಗಳಿಗೆ ಮಹಾರಾಷ್ಟ್ರದ ಸತಾರಾದ 54 ವರ್ಷದ ವ್ಯಕ್ತಿ ಕೂಡ ಸಾಕ್ಷಿಯಾಗಿದ್ದಾರೆ.

ಹೌದು. ಧನಜಿ ಜಾಗ್ದಳೆ ಎಂಬವರಿಗೆ ಬಸ್ ನಿಲ್ದಾಣದಲ್ಲಿ ದೀಪಾವಳಿ ಹಬ್ಬದಂದು 40 ಸಾವಿರ ರೂ.ನ ಕಂತೆಯೇ ಸಿಕ್ಕಿತ್ತು. ಆದರೆ ಜಾಗ್ದಳೆ ಸಿಕ್ಕಿದ್ದೇ ಸೀರುಂಡೆ ಎನ್ನುವಂತೆ ಹಣವನ್ನು ಇಟ್ಟುಕೊಳ್ಳದೆ ಅದರ ಮಾಲೀಕರಿಗೆ ಒಪ್ಪಿಸುವ ಮೂಲಕ ಪ್ರಾಮಾಣಿಕತೆ ಮೆರೆದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಹಣ ಸಿಕ್ಕ ಬಳಿಕ ಮಾಲೀಕ, ವ್ಯಕ್ತಿಯ ಪ್ರಾಮಾಣಿಕತೆಯನ್ನು ಮೆಚ್ಚಿ 1 ಸಾವಿರ ನೀಡಿದ್ದಾರೆ. ಆದರೆ ಈ ವೇಳೆ ಜಾಗ್ದಳೆ ಮಾತ್ರ ಅದರಲ್ಲಿ ಕೇವಲ 7 ರೂ.ಗಳನ್ನು ಪಡೆದಿದ್ದಾರೆ. ಯಾಕಂದ್ರೆ ಆ ಸಂದರ್ಭದಲ್ಲಿ ಜಾಗ್ದಳೆ ಪಾಕೆಟ್ ನಲ್ಲಿ ಇದ್ದಿದ್ದು ಕೇವಲ 3 ರೂ. ಮಾತ್ರ. ಹೀಗಾಗಿ ಅವರಿದ್ದ ಸ್ಥಳದಿಂದ ಸತಾರಾದ ಮಾನ್ ತಾಲೂಕಿನ ಪಿಂಗಾಲಿ ಗ್ರಾಮಕ್ಕೆ ತೆರಳಬೇಕಾದರೆ ಬಸ್ ಟಿಕೆಟ್ ದರ 10 ರೂ. ಆಗಿತ್ತು. ಈ ಹಿನ್ನೆಲೆಯಲ್ಲಿ ಜಾಗ್ದಾಳೆ ಕೇವಲ 7 ರೂ. ಪಡೆದುಕೊಂಡಿದ್ದಾರೆ.

‘ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕೆಲಸದ ನಿಮಿತ್ತ ನಾನು ದಹಿವಾಡ್‌ಗೆ ತೆರಳಿ ವಾಪಸ್ ಬಸ್ ನಿಲ್ದಾಣಕ್ಕೆ ಬಂದೆ. ಈ ವೇಳೆ ನಿಲ್ದಾಣದ ಹತ್ತಿರ ಹಣದ ಕಂತೆ ಬಿದ್ದಿರುವುದು ನನ್ನ ಗಮನಕ್ಕೆ ಬಂತು. ಇದನ್ನು ನೋಡಿ ಸುತ್ತಮುತ್ತ ಇದ್ದವರೆಲ್ಲರಲ್ಲೂ ಹಣ ಯಾರದೆಂದು ಕೇಳಿದೆ. ಆಗ ಹಣ ಕಳೆದುಕೊಂಡು ಚಿಂತೆಯಲ್ಲಿದ್ದ ವ್ಯಕ್ತಿ ಸಿಕ್ಕಿದರು. ಕೂಡಲೇ ಅವರಿಗೆ ಹಣ ಕಂತೆಯನ್ನು ನೀಡಿದೆ’ ಎಂದು ಜಾಗ್ದಾಳೆ ತಿಳಿಸಿದರು.

ಹಣ ಕಳೆದುಕೊಂಡ ವ್ಯಕ್ತಿಯು ಆತನ ಪತ್ನಿಯ ಸರ್ಜರಿಗೆಂದು 40 ಸಾವಿರ ಹಣ ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬಸ್ ನಿಲ್ದಾಣದ ಬಳಿ ಆತನ ಕೈಯಿಂದ ಹಣ ಜಾರಿ ಬಿದ್ದಿದೆ. ನಾನು ಹಣ ವಾಪಸ್ ನೀಡಿದಾಗ ವ್ಯಕ್ತಿ ನನಗೆ 1 ಸಾವಿರ ರೂ. ನೀಡಿದರು. ಆದರೆ ನನಗೆ ಅದರಲ್ಲಿ 7 ರೂ.ನ ಅವಶ್ಯಕತೆ ಇತ್ತು. ಹೀಗಾಗಿ ಅಷ್ಟನ್ನು ಮಾತ್ರ ತೆಗೆದುಕೊಂಡೆ ಎಂದು ಜಾಗ್ದಾಳೆ ವಿವರಿಸಿದರು.

ಜಾಗ್ದಾಳೆಯ ಪ್ರಾಮಾಣಿಕತೆಯನ್ನು ಮೆಚ್ಚಿ ಸತಾರಾ ಬಿಜೆಪಿ ಶಾಸಕ ಶಿವೇಂದ್ರರಾಜೆ ಭೋಸಲೆ, ಮಾಜಿ ಸಂಸದ ದಯನ್ರಾಜೆ ಭೋಸಲೆ ಹಾಗೂ ಮತ್ತಿತರ ಗಣ್ಯರು ಶಹಬ್ಬಾಸ್ ಗಿರಿ ನೀಡಿದ್ದಾರೆ. ಅಲ್ಲದೆ ಗಣ್ಯರು ಹಣ ನೀಡಲು ಬಂದಾಗ ಅದನ್ನು ತೆಗೆದುಕೊಳ್ಳಲು ಜಾಗ್ದಾಳೆ ನಿರಾಕರಿಸಿದ್ದಾರೆ.

Comments

Leave a Reply

Your email address will not be published. Required fields are marked *