ಮಂಚಕ್ಕೆ ಬರಲು ನಿರಾಕರಿಸಿದ್ದಕ್ಕೆ ಪ್ರೇಯಸಿಯನ್ನು ಕೊಂದು ಟಾಯ್ಲೆಟ್ ಗುಂಡಿಯಲ್ಲಿ ಹೂತಿಟ್ಟ!

ತುಮಕೂರು: ಮಂಚಕ್ಕೆ ಬರುವುದನ್ನು ನಿಲ್ಲಿಸಿದ್ದಕ್ಕೆ ಪ್ರೇಯಸಿಯನ್ನು ಕೊಂದು ನಂತರ ನಿರ್ಮಾಣ ಹಂತದಲ್ಲಿದ್ದ ಶೌಚಾಲಯದ ಗುಂಡಿಯಲ್ಲಿ ಶವವನ್ನು ಹೂತಿಟ್ಟಿದ್ದ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

ರಾಜಮ್ಮ (36) ಕೊಲೆಯಾದ ದುರ್ದೈವಿ. ಕೊಲೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಹನುಮಂತೇ ಗೌಡ ನನ್ನು ಪೊಲೀಸರು ಬಂಧಿಸಿದ್ದಾರೆ.

ಇಬ್ಬರ ನಡುವೆ ಅನೈತಿಕ ಸಂಬಂಧವಿದ್ದು, ದೈಹಿಕ ಸಂಪರ್ಕಕ್ಕೆ ಒಪ್ಪದ್ದಕ್ಕೆ ನವೆಂಬರ್ 9ರಂದು ತುಮಕೂರು ತಾಲೂಕಿನ ಗೂಳೂರು ಸಮೀಪದ ಎ.ಕೆ ಕಾವಲ್‍ನಲ್ಲಿ ಹನುಮಂತೇ ಗೌಡ ಕೊಲೆ ಮಾಡಿದ್ದ.

ನಡೆದಿದ್ದೇನು?
ರಾಜಮ್ಮ ಮದುವೆಯಾಗಿ 9 ವರ್ಷಗಳಾಗಿದ್ದು, ಪತಿ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಎ.ಕೆ. ಕಾವಲ್ ಗ್ರಾಮದ ಹನುಮಂತೇಗೌಡನಿಗೆ 15 ವರ್ಷದ ಹಿಂದೆ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಈತ ಗಾರೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ.

ಕೆಲ ತಿಂಗಳ ಹಿಂದೆ ರಾಜಮ್ಮ ಮನೆಯಲ್ಲಿ ಗಾರೆ ಕೆಲಸ ಮಾಡಲು ಬಂದ ಸಮಯದಲ್ಲಿ ಇಬ್ಬರ ನಡುವೆ ಅನೈತಿಕ ಸಂಬಂಧ ಬೆಳೆದಿದೆ. ಎರಡು ತಿಂಗಳ ಹಿಂದೆ ರಾಜಮ್ಮ ದೈಹಿಕ ಸಂಪರ್ಕಕ್ಕೆ ನಿರಾಕರಿಸಿ ಆತನಿಂದ ದೂರವಾಗಿದ್ದಳು. ಆದರೆ ಆರೋಪಿ ಹೇಗಾದರೂ ಆಕೆಯನ್ನು ಒಪ್ಪಿಸಬೇಕು ಎಂದು ಪುಸಲಾಯಿಸಿ ನವೆಂಬರ್ 9 ರಂದು ತನ್ನ ಮನೆಗೆ ಕರೆದಿದ್ದಾನೆ. ಮನೆಗೆ ರಾಜಮ್ಮ ಬಂದ ನಂತರ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಇದಕ್ಕೆ ಪ್ರತಿರೋಧ ಒಡ್ಡಿದಾಗ ಬಿದಿರಿನ ದೊಣ್ಣೆಯಿಂದ ಹೊಡೆದಿದ್ದಾನೆ. ಏಟು ತಾಳಲಾರದೇ ರಾಜಮ್ಮ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ನಂತರ ತನ್ನ ಕೃತ್ಯ ಯಾರಿಗೂ ತಿಳಿಯಬಾರದು ಎಂದು ನಿರ್ಮಾಣ ಹಂತದಲ್ಲಿದ್ದ ಶೌಚಾಲಯದ ಗುಂಡಿಗೆ ಶವವನ್ನು ಹಾಕಿ ಮುಚ್ಚಿದ್ದಾನೆ.

ಸಿಕ್ಕಿಬಿದ್ದಿದ್ದು ಹೇಗೆ?
ರಾಜಮ್ಮ ಕಾಣೆಯಾಗಿದ್ದಾರೆ ಎಂದು ಅವರ ತಂಗಿ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಜೊತೆಗೆ ಹನುಮಂತೇಗೌಡ ನ ಮೇಲೆ ಸಂಶಯವನ್ನು ವ್ಯಕ್ತಪಡಿಸಿದ್ದರು. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ತುಮಕೂರು ತಹಶೀಲ್ದಾರ್ ರಂಗೇಗೌಡರ ಸಮ್ಮುಖದಲ್ಲಿ ಹೆಬ್ಬೂರು ಪೊಲೀಸರು ಹೂತಿಟ್ಟ ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿದ್ದಾರೆ.

 

 

Comments

Leave a Reply

Your email address will not be published. Required fields are marked *