83,00,00,00,00,000 ಕ್ರಿಪ್ಟೋ ವಂಚನೆ – ಕೇರಳದಲ್ಲಿ ಸಿಬಿಐನಿಂದ ಲಿಥುವೇನಿಯಾದ ಪ್ರಜೆ ಅರೆಸ್ಟ್‌

ನವದೆಹಲಿ: ಕ್ರಿಪ್ಟೋ ವಂಚನೆ (Crypto Fraud) ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕಕ್ಕೆ (USA) ಬೇಕಾಗಿದ್ದ ಲಿಥುವೇನಿಯಾದ ಪ್ರಜೆಯನ್ನು ಕೇರಳದಲ್ಲಿ ಕೇಂದ್ರೀಯ ತನಿಖಾ ದಳ (CBI) ಬಂಧಿಸಿದೆ.

ಅಮೆರಿಕದ ಸೀಕ್ರೆಟ್ ಸರ್ವೀಸ್‌ನ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ 46 ವರ್ಷದ ಲಿಥುವೇನಿಯಾದ ಅಲೆಕ್ಸೆಜ್ ಬೆಸಿಯೊಕೊವ್ (Aleksej Besciokov) ತನ್ನ ಕುಟುಂಬದೊಂದಿಗೆ ಕೇರಳಕ್ಕೆ ಬಂದಿದ್ದ. ಮಂಗಳವಾರ ಸಂಜೆ ವರ್ಕಲಾ ಪೊಲೀಸರ ಸಹಾಯದಿಂದ ಆತನನ್ನು ಬಂಧನ ಮಾಡಲಾಗಿದೆ.

ಈ ವಾರದ ಆರಂಭದಲ್ಲಿ ಅಮೆರಿಕದ ಅಧಿಕಾರಿಗಳ ಕೋರಿಕೆಯ ಮೇರೆಗೆ ವಿದೇಶಾಂಗ ಸಚಿವಾಲಯವು ತಾತ್ಕಾಲಿಕ ಬಂಧನ ವಾರಂಟ್ ಪಡೆದಿತ್ತು. ನಂತರ ಸಿಬಿಐ ಮತ್ತು ಕೇರಳ ಪೊಲೀಸರ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬಂಧಿಸಿದೆ.

ಅಲೆಕ್ಸೆಜ್ ಬೆಸಿಯೊಕೊವ್, ರಾನ್ಸಮ್‌ವೇರ್, ಕಂಪ್ಯೂಟರ್ ಹ್ಯಾಕಿಂಗ್ ಮತ್ತು ಮಾದಕವಸ್ತು ವಹಿವಾಟುಗಳಂತಹ ಅಪರಾಧ ಚಟುವಟಿಕೆಗಳ ಆದಾಯವನ್ನು ಅಕ್ರಮವಾಗಿ ವರ್ಗಾಯಿಸಲು ಗ್ಯಾರಂಟೆಕ್ಸ್ (Garantex) ಹೆಸರಿನಲ್ಲಿ ಕ್ರಿಪ್ಟೋಕರೆನ್ಸಿ ವಿನಿಮಯ ಕೇಂದ್ರವನ್ನು ಸ್ಥಾಪಿಸಿದ್ದ.

ಬೆಸಿಯೊಕೊವ್ ದೇಶದಿಂದ ಪಲಾಯನ ಮಾಡಲು ಯೋಜಿಸುತ್ತಿದ್ದಾಗ ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯುಎಸ್ ಸೀಕ್ರೆಟ್ ಸರ್ವಿಸ್ ದಾಖಲೆಗಳ ಪ್ರಕಾರ, ಬೆಸಿಯೊಕೊವ್ ಸುಮಾರು ಆರು ವರ್ಷಗಳ ಅವಧಿಯಲ್ಲಿ ಗ್ಯಾರಂಟೆಕ್ಸ್ ಅನ್ನು ನಿಯಂತ್ರಿಸಿದ್ದಾನೆ. ಭಯೋತ್ಪಾದನೆ ಸೇರಿದಂತೆ ಅಂತರರಾಷ್ಟ್ರೀಯ ಕ್ರಿಮಿನಲ್ ಸಂಘಟನೆಗಳಿಂದ ಕನಿಷ್ಠ 96 ಬಿಲಿಯನ್ ಡಾಲರ್‌ (8 ಲಕ್ಷ ಕೋಟಿ ರೂ.ಗೂ ಹೆಚ್ಚು) ಕ್ರಿಪ್ಟೋಕರೆನ್ಸಿ ವಹಿವಾಟು ಮೂಲಕ ವರ್ಗಾವಣೆಗೆ ಮಾಡಿರುವ ಆರೋಪ ಬೆಸಿಯೊಕೊವ್ ಮೇಲಿದೆ.