ಮಹಿಳೆಯ ಧ್ವನಿಯಲ್ಲಿ ಮಾತನಾಡಿ 7 ವಿದ್ಯಾರ್ಥಿನಿಯರ ಅತ್ಯಾಚಾರ – ಆರೋಪಿ ಸಿಕ್ಕಿಬಿದ್ದಿದ್ದೇ ರೋಚಕ

– ಬುಲ್ಡೋಜರ್ ಬಳಸಿ ಆರೋಪಿಗಳ ಮನೆ ಧ್ವಂಸ

ಭೋಪಾಲ್: ಧ್ವನಿಯನ್ನು ಮಾರ್ಫ್ ಮಾಡುವ ಆಪ್ ಬಳಸಿ (Voice-Changing App) ಮಧ್ಯಪ್ರದೇಶದ (Madhya Pradesh) ವ್ಯಕ್ತಿಯೊಬ್ಬ ಶಿಕ್ಷಕಿಯಂತೆ ಬುಡಕಟ್ಟು ವಿದ್ಯಾರ್ಥಿನಿಯರೊಂದಿಗೆ ಮಾತನಾಡಿ, ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಬಂಧಿತ ಆರೋಪಿಯನ್ನು ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಬ್ರಜೇಶ್ ಕುಶ್ವಾಹಾ ಎಂದು ಗುರುತಿಸಲಾಗಿದೆ. ಆರೋಪಿ ಕಾಲೇಜೊಂದರ ಶಿಕ್ಷಕಿಯಂತೆ ಬುಡಕಟ್ಟು ಕಾಲೇಜು ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ಪಡೆಯಲು ಸಹಾಯ ಮಾಡುವುದಾಗಿ ಧ್ವನಿಯನ್ನು ಮಾರ್ಫ್ ಮಾಡುವ ಆಪ್ ಬಳಸಿ ಕರೆ ಮಾಡುತ್ತಿದ್ದ. ಬಳಿಕ ನಿರ್ಜನ ಸ್ಥಳವೊಂದನ್ನು ಸೂಚಿಸಿ, ಅಲ್ಲಿ ವ್ಯಕ್ತಿಯೊಬ್ಬ ಬೈಕ್‍ನಲ್ಲಿ ಕರದುಕೊಂಡು ಬರುತ್ತಾನೆ ಎಂದು ನಂಬಿಸಿ, ಕಾಡಿಗೆ ಕರೆದೊಯ್ದು ಅತ್ಯಾಚಾರ ಎಸಗುತ್ತಿದ್ದ. ಇದನ್ನೂ ಓದಿ: ಕುರಾನ್ ಸತ್ಯವಾಗಿ ನನ್ನ ಗಂಡನಿಗೆ ಯಾವ್ದೇ ರೋಗ ಇರಲಿಲ್ಲ, ಪೊಲೀಸರೇ ಹೊಡೆದು ಕೊಂದಿದ್ದಾರೆ: ಮೃತ ಆದಿಲ್ ಪತ್ನಿ

ಈ ರೀತಿ ಕನಿಷ್ಠ ಏಳು ಬುಡಕಟ್ಟು ಕಾಲೇಜು ವಿದ್ಯಾರ್ಥಿನಿಯರ ಮೇಲೆ ಆತ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆರೋಪಿ ಅನಕ್ಷರಸ್ಥನಾಗಿದ್ದು ಈ ಘೋರ ಅಪರಾಧಕ್ಕಾಗಿ ತಂತ್ರಜ್ಞಾನವನ್ನು ಬಳಸಿಕೊಂಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಆರೋಪಿ ಕುಶ್ವಾಹ ಹೆಲ್ಮೆಟ್ ಧರಿಸುತ್ತಿದ್ದ. ಅಲ್ಲದೇ ಕೈಗಳಿಗೆ ಗ್ಲೌಸ್ ಧರಿಸುತ್ತಿದ್ದ. ಇದರಿಂದಾಗಿ ಸಂತ್ರಸ್ತೆಯರಿಗೆ ಆತನ ಗುರುತು ಪತ್ತೆಹಚ್ಚಲು ಸಾಧ್ಯವಾಗುತ್ತಿರಲಿಲ್ಲ. ಆದರೆ ದಾಖಲಾದ ದೂರುಗಳಲ್ಲಿ ಆತ ಗ್ಲೌಸ್ ಧರಿಸುತ್ತಿದ್ದ ಎಂಬ ವಿಷಯದಿಂದ, ಆತ ಸಿಕ್ಕಿಬಿದ್ದಿದ್ದಾನೆ. ಆರೋಪಿ ಈ ಹಿಂದೆ ಮಹಾರಾಷ್ಟ್ರದ ಗಿರಣಿಯೊಂದರಲ್ಲಿ ಕೆಲಸ ಮಾಡುವಾಗ ಕೈ ಸುಟ್ಟುಕೊಂಡಿದ್ದ. ಇದೇ ಕಾರಣಕ್ಕೆ ಗ್ಲೌಸ್ ಧರಿಸುತ್ತಿದ್ದ ಎಂದು ತಿಳಿದು ಬಂದಿದೆ.

ಕುಶ್ವಾಹಾ ಸೇರಿ ಆತನ ಮೂವರು ಸಹಚರರನ್ನು ಬಂಧಿಸಲಾಗಿದೆ. ಸಿಧಿ ಜಿಲ್ಲಾಡಳಿತ ಬುಲ್ಡೋಜರ್ ಬಳಸಿ ಆರೋಪಿಗಳ ಮನೆಯನ್ನು ಧ್ವಂಸಗೊಳಿಸಿದೆ.

ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಆರೋಪಿಗಳಿಂದ ಇನ್ನೂ ಹೆಚ್ಚಿನ ದೌರ್ಜನ್ಯಗಳಾಗಿವೆಯೇ ಎಂದು ತನಿಖೆ ನಡೆಸಲು 9 ಪೊಲೀಸ್ ಅಧಿಕಾರಿಗಳ ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ. ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿ ಮೇಲೆ ಕಲ್ಲು ತೂರಾಟ