ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ, ಆಕೆ ಆತ್ಮಹತ್ಯೆಗೆ ಶರಣಾದ ನಂತರ ತಂಗಿಗೂ ಲೈಂಗಿಕ ಕಿರುಕುಳ

ರಾಮನಗರ: ಯುವತಿಯೊಬ್ಬರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಆಕೆಯ ಸಾವಿಗೆ ಕಾರಣನಾದ ವ್ಯಕ್ತಿಯೊಬ್ಬ ಈಗ ಮೃತ ಯುವತಿಯ ತಂಗಿಗೂ ಸಹ ಲೈಂಗಿಕ ಕಿರುಕುಳ ನೀಡುತ್ತಿರೋ ಘಟನೆ ಚನ್ನಪಟ್ಟಣ ತಾಲೂಕಿನ ಬಿ.ವಿ ಹಳ್ಳಿಯಲ್ಲಿ ನಡೆದಿದೆ.

ಮಹಾಂತೇಶ್ ಲೈಂಗಿಕ ಕಿರುಕುಳ ನೀಡುತ್ತಿರುವ ವ್ಯಕ್ತಿ. ಈತ ಗ್ರಾಮದ ಯುವತಿಯೊಬ್ಬಳ ಮೇಲೆ ಕಣ್ಣು ಹಾಕಿ ಅತ್ಯಾಚಾರಕ್ಕೆ ಯತ್ನಿಸಿದ್ದ. ಇದರಿಂದ ಮನನೊಂದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳು. ಆದರೆ ಇದೀಗ ಕಾಮುಕನ ಕಣ್ಣು ಆಕೆಯ ಸೋದರಿ ಮೇಲೆ ಬಿದ್ದಿದೆ.

ಎಲ್ಲೆಂದರಲ್ಲಿ ಬಾಲಕಿಗೆ ಅವಾಚ್ಯ ಶಬ್ದಗಳಿಂದ ನಿಂದಿಸೋದು, ಅಸಭ್ಯವಾಗಿ ಮಾತನಾಡುವ ಮೂಲಕ ಕಿರುಕುಳ ನೀಡುತ್ತಿದ್ದಾನೆ. ಅಷ್ಟೇ ಅಲ್ಲದೇ ನಿನ್ನಕ್ಕನಂತೆ ನಿನಗೂ ಒಂದು ಗತಿ ಕಾಣಿಸೋದಾಗಿ ವಾರ್ನಿಂಗ್ ಮಾಡಿದ್ದಾನೆ. ಮಹಾಂತೇಶ್ ದಿನನಿತ್ಯ ಕಿರುಕುಳ ನೀಡುತ್ತಿದ್ದು ಬಾಲಕಿ ಪ್ರತಿದಿನ ಶಾಲೆಗೆ ಭಯದಲ್ಲೇ ಹೋಗಿ ಬರುವಂತಾಗಿದೆ.

ಕಳೆದ ವರ್ಷ ಅಕ್ಟೋಬರ್ 20ರಂದು ಅಂಬುಜಾ ಎಂಬ ಯುವತಿಯ ಮೇಲೆ ಮಹಾಂತೇಶ್ ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ವೇಳೆ ಆಕೆಯ ಚಿಕ್ಕಮ್ಮ ನೆರವಿಗೆ ಬಂದಿದ್ದರಿಂದ ಆಕೆ ಮಾನ ಉಳಿದಿತ್ತು. ಆದರೆ ಗ್ರಾಮಸ್ಥರು ರಾಜಿ ಪಂಚಾಯ್ತಿ ಎಂದು ಹೇಳಿ ಮಹಾಂತೇಶ್‍ನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡದಂತೆ ತಡೆದಿದ್ದರು. ಇದರಿಂದ ಮನನೊಂದ ಅಂಬುಜಾ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದರು. ಮಗಳ ಸಾವಿನಿಂದ ಮನನೊಂದಿದ್ದ ಅಂಬುಜಾ ತಾಯಿ ಮಹಾಂತೇಶ್‍ನಿಗೆ ಚಪ್ಪಲಿ ಸೇವೆ ಮಾಡಿದ್ದರು.

ಇದರಿಂದ ಕುಪಿತನಾದ ಮಹಾಂತೇಶ್ ಇದೀಗ ಅಂಬುಜಾ ಸೋದರಿ ಮೇಲೆ ಕಣ್ಣು ಹಾಕಿದ್ದಾನೆ. ಇತ್ತೀಚೆಗೆ ಬಟ್ಟೆ ಒಗೆಯುವ ವೇಳೆ ಆಕೆಯ ಕೈ ಹಿಡಿದು ಎಳೆದಾಡಿದ್ದಾನೆ. ಅಲ್ಲದೆ ಬೆದರಿಕೆ ಕೂಡ ಹಾಕಿದ್ದಾನೆ. ಮುದ್ದಿನಂತೆ ಅಕ್ಕನ ಮಕ್ಕಳನ್ನು ತಂದು ಸಾಕಿದ್ದಕ್ಕೆ ಇದೀಗ ಆ ಮಕ್ಕಳನ್ನ ಯಾಕಾದರೂ ಇಲ್ಲಿ ಕರೆತಂದೆನೋ ಎನ್ನುವ ನೋವಿನಲ್ಲೇ ಅಂಬುಜಾ ಚಿಕ್ಕಮ್ಮ ಕಣ್ಣೀರು ಹಾಕುತ್ತಿದ್ದಾರೆ.

ಈ ವಿಚಾರದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಕ್ರಮ ತೆಗೆದುಕೊಂಡಿಲ್ಲ ಎನ್ನಲಾಗಿದೆ. ತನ್ನಕ್ಕನಿಗೆ ಆದ ಸ್ಥಿತಿ ಬೇರೊಬ್ಬರಿಗೆ ಆಗುವುದು ಬೇಡ. ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ನೊಂದ ಬಾಲಕಿ ಮನವಿ ಮಾಡಿದ್ದಾಳೆ.

Comments

Leave a Reply

Your email address will not be published. Required fields are marked *