ಮಲಗಿದ್ದ ಸೋದರನ ರುಂಡ ಕತ್ತರಿಸಿ ಪೊಲೀಸ್ ಠಾಣೆಗೆ ತಂದ

ಭುವನೇಶ್ವರ: ವ್ಯಕ್ತಿಯೊಬ್ಬ ತನ್ನ ಸಹೋದರನ ಶಿರಚ್ಛೇದನ ಮಾಡಿ ಅದನ್ನು ಬ್ಯಾಗ್‍ನಲ್ಲಿ ತುಂಬಿಸಿಕೊಂಡು ಪೊಲೀಸ್ ಠಾಣೆಗೆ ಬಂದಿರುವ ಆಘಾತಕಾರಿ ಘಟನೆ ಒಡಿಶಾದ ಸಂಬಲ್ಪುರ್ ಜಿಲ್ಲೆಯಲ್ಲಿ ನಡೆದಿದೆ.

ಈ ಘಟನೆ ಐಂಠಾಪಾಲಿ ಪೊಲೀಸ್ ವ್ಯಾಪ್ತಿಯಲ್ಲಿ ಬರುವ ಟಿಲೈಮಾಲಾ ಗ್ರಾಮದಲ್ಲಿ ನಡೆದಿದೆ. ಸತ್ಯನಾರಾಯಣ ಕೊಲೆಯಾದ ವ್ಯಕ್ತಿ. ಆರೋಪಿಯನ್ನು ಉಜ್ಜಲಾ ಮುಂಡ ಎಂದು ಗುರುತಿಸಲಾಗಿದ್ದು, ಇವನು ಮೃತ ವ್ಯಕ್ತಿಯ ಸಂಬಂಧಿ ಸಹೋದರನಾಗಬೇಕು ಎಂದು ತಿಳಿದು ಬಂದಿದೆ. ಈತ ಪೊಲೀಸ್ ಠಾಣೆಗೆ ಬ್ಯಾಗಿನಲ್ಲಿ ಕತ್ತರಿಸಿದ್ದ ರುಂಡವನ್ನು ತೆಗೆದುಕೊಂಡು ಬಂದು ಕುಳಿತಿದ್ದನು ಎಂದು ಪೊಲೀಸ್ ಅಧಿಕಾರಿ ಭವಾನಿ ಶಂಕರ್ ಉದ್ಗಟ ತಿಳಿಸಿದ್ದಾರೆ.

ಏನಿದು ಪ್ರಕರಣ:
ಮೃತ ಸತ್ಯನಾರಾಯಣ ಮಂಗಳವಾರ ರಾತ್ರಿ ಮನೆಯ ವರಾಂಡದಲ್ಲಿ ಸೊಳ್ಳೆ ಪರದೆ ಕಟ್ಟಿಕೊಂಡು ಒಬ್ಬನೇ ಮಲಗಿದ್ದನು. ಈ ವೇಳೆ ಆರೋಪಿ ಉಜ್ಜಲ ಮುಂಡ ಬಂದು ಏಕಾಏಕಿ ಹರಿತವಾದ ಆಯುಧದಿಂದ ಸತ್ಯನಾರಾಯಣನ ಕತ್ತು ಕತ್ತರಿಸಿದ್ದಾನೆ. ನಂತರ ಕತ್ತು ಹಿಡಿದುಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ.

ಇಂದು ಮುಂಜಾನೆ ಕುಟುಂಬದವರು ಎದ್ದು ನೋಡಿದಾಗ ತಲೆಯಿಲ್ಲದ ದೇಹವನ್ನು ನೋಡಿ ದಂಗಾಗಿ ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಫೋರೆನ್ಸಿಕ್ ತಂಡ ಮತ್ತು ಶ್ವಾನಗಳನ್ನು ಕರೆತಂದು ಹುಡುಕಾಟ ಮಾಡಿದ್ದಾರೆ.

ಇತ್ತ ಕೊಲೆ ಮಾಡಿ ತಲೆ ತೆಗೆದುಕೊಂಡು ಹೋಗಿದ್ದ ಆರೋಪಿ ಪೊಲೀಸ್ ಠಾಣೆಗೆ ಹೋಗಿ ತಾನೂ ಕೊಲೆ ಮಾಡಿರುವ ಕುರಿತು ತಪ್ಪೊಪ್ಪಿಕೊಂಡಿದ್ದಾನೆ. ಸದ್ಯಕ್ಕೆ ಆರೋಪಿಯನ್ನು ಬಂಧಿಸಿದ್ದು, ಆತ ಕೊಲೆಗೆ ಬಳಸಿದ್ದ ಆಯುಧವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಆದರೆ ಆಸ್ತಿ ವಿವಾದವೇ ಈ ಕೊಲೆಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.

Comments

Leave a Reply

Your email address will not be published. Required fields are marked *