ಚಾಟ್ ಮಾಡಿದ್ದಕ್ಕೆ ಹೆಂಡತಿಯನ್ನೇ ಉಸಿರುಗಟ್ಟಿಸಿ ಕೊಂದ!

ಲಕ್ನೋ: ಹೆಂಡತಿ ಹೆಚ್ಚು ಸಮಯ ಚಾಟ್ ಮಾಡುವುದರಲ್ಲೇ ಸಮಯವನ್ನು ಕಳೆಯುತ್ತಿದ್ದ ಹಿನ್ನೆಲೆ, ಪತಿಯು ಸೀರೆಯಿಂದ ಬಿಗಿದು ಉಸಿರುಗಟ್ಟಿಸಿ ಕೊಂದಿರುವ ಘಟನೆ ಉತ್ತರಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

ಉನ್ನಾವೋ ಜಿಲ್ಲೆಯ ಹಸನ್‍ಗಂಜ್ ಕೊಟ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಅಹ್ಮದ್‍ಪುರ ವಡೆ ಗ್ರಾಮದಲ್ಲಿ ಈ ಕೃತ್ಯ ನಡೆದಿದೆ. ಹೆಂಡತಿಯನ್ನು ಕೊಂದ ನಂತರ ಪತಿಯೇ ಪೊಲೀಸರ ಬಳಿ ಬಂದು ತಪ್ಪನ್ನು ಒಪ್ಪಿಕೊಂಡಿದ್ದಾನೆ. ನನ್ನ ಪತ್ನಿ ಹೆಚ್ಚು ಸಮಯ ಫೋನ್ ನೋಡುವುದರಲ್ಲಿ ಮತ್ತು ಬೇರೆಯವರ ಜೊತೆ ಚಾಟ್ ಮಾಡುವುದರಲ್ಲಿ ಕಾಲ ಕಳೆಯುತ್ತಿದ್ದಳು. ಅದಕ್ಕೆ ಆಕೆ ಮೇಲೆ ಕೋಪ ಹೆಚ್ಚಾಗಿ ಈ ಕೆಲಸ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ನಾನಾ ವೇಷ ತೊಟ್ಟು ಜನರಿಗೆ ಟೋಪಿ ಹಾಕಿದ್ದ ಸ್ವಾಮೀಜಿ ಪೊಲೀಸರ ಅತಿಥಿ!

ಈ ಕುರಿತು ಮಾತನಾಡಿದ ಪೊಲೀಸ್ ಅಧಿಕಾರಿಗಳು, ಪತ್ನಿ ಆರತಿ ಯಾವಾಗಲೂ ತನ್ನ ಫೋನ್‌ನಲ್ಲಿ ಬ್ಯುಸಿಯಾಗಿರುತ್ತಿದ್ದಳು. ಪತಿ ಅರುಣ್ ಒಂದು ವೇಳೆ ಆಕೆಯ ಫೋನ್ ಚೆಕ್ ಮಾಡಲು ಬಂದ್ರೆ ಅವನ ಜೊತೆಗೆ ಜಗಳವಾಡುತ್ತಿದ್ದಳು. ಈ ಹಿನ್ನೆಲೆ ಅರುಣ್‍ ಕೋಪಗೊಂಡು ಜಗಳವಾಡಿದ್ದಾರೆ. ಈ ವೇಳೆ ಪಕ್ಕದಲ್ಲೇ ಇದ್ದ ಸೀರೆಯನ್ನು ತೆಗೆದುಕೊಂಡು ಆಕೆಯ ಕುತ್ತಿಗೆಗೆ ಸುತ್ತಿ ಬಿಗಿದಿದ್ದಾನೆ. ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ವಿವರಿಸಿದ್ದಾರೆ.

ಪ್ರಸ್ತುತ ಪೊಲೀಸರು ಆರೋಪಿ ಅರುಣ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಆತನನ್ನು ಬಂಧಿಸಿದ್ದಾರೆ. ಅರುಣ್ ಎಂಟು ವರ್ಷಗಳ ಹಿಂದೆ ಆರತಿ ಅವರನ್ನು ಮದುವೆಯಾಗಿದ್ದರು. ಇವರಿಗೆ ಒಬ್ಬ ಮಗನಿದ್ದ. ಅವರು ತಮ್ಮ ಮನೆ ಸಮೀಪದ ಅಂಗಡಿಯಲ್ಲಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಆಂಜನೇಯನ ಜನ್ಮಭೂಮಿ ಹೈಜಾಕ್ – ಬಿಜೆಪಿ ಯಾಕೆ ಸುಮ್ಮನಿದೆ ಉಗ್ರಪ್ಪ ಪ್ರಶ್ನೆ

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

Comments

Leave a Reply

Your email address will not be published. Required fields are marked *