ವಾರದ ಬಳಿಕ ಸಿಕ್ಕ ಮಾಲೀಕ- ಒಂದೇ ಸಮನೆ ಶ್ವಾನ ರೋಧನೆ

– ಕಣ್ಣೀರು ಹಾಕುತ್ತಲೇ ಬಿಟ್ಟೋದ್ರು
– ಗಾಯವಾದ್ರೂ ಕುಂಟುತ್ತಾ ಹಿಂಬಾಲಿಸಿದ ಶ್ವಾನ

ಬೆಳಗಾವಿ: ಪ್ರವಾಹದ ಅಬ್ಬರಕ್ಕೆ ಮಾಲೀಕನನ್ನು ಕಳೆದುಕೊಂಡು ಅಲೆದಾಡುತ್ತಿದ್ದ ಶ್ವಾನಕ್ಕೆ ಒಂದು ವಾರದ ಬಳಿಕ ಮಾಲೀಕ ಸಿಕ್ಕಿದ್ದಾರೆ. ಒಂದೆಡೆ ಪ್ರವಾಹದ ಭೀತಿ, ಇನ್ನೊಂದೆಡೆ ಮಾಲೀಕ ಸಿಕ್ಕ ಖುಷಿಗೆ ಶ್ವಾನ ಸುಮಾರು ಅರ್ಧ ಗಂಟೆ ಒಂದೇ ಸಮನೆ ರೋಧಿಸಿ, ಮಾಲೀಕನ ಮಡಿಲಲ್ಲಿ ಹೊರಳಾಡಿ ನೋವು ವ್ಯಕ್ತಪಡಿಸಿದ ಮನಕಲಕುವ ಘಟನೆ ಗೋಕಾಕ್‍ನಲ್ಲಿ ನಡೆದಿದೆ.

ಪ್ರವಾಹದ ಬಳಿಕ ಸಾಕು ನಾಯಿ ತನ್ನ ಮಾಲೀಕನನ್ನು ಕಂಡು ಖುಷಿ ವ್ಯಕ್ತಪಡಿಸಿದೆ. ಆದರೆ ರಸ್ತೆಯಲ್ಲಿ ಮುಳುಗುವಷ್ಟು ನೀರಿದ್ದ ಕಾರಣ ಮಾಲೀಕ ಬೇಸರದಿಂದಲೇ ಶ್ವಾನವನ್ನು ಕರೆದುಕೊಂಡು ಹೋಗಲಾಗದೇ ಮತ್ತೆ ಅಲ್ಲಿಯೇ ಬಿಟ್ಟು ಹೋಗಿದ್ದಾರೆ.

ನಾಯಿ ಪ್ರವಾಹದಲ್ಲಿ ಸಿಲುಕಿದ್ದರಿಂದ ಕಾಲಿಗೆ ಗಾಯವಾಗಿದೆ. ಹೀಗಿದ್ದರೂ ತನ್ನನ್ನು ಕರೆದುಕೊಂಡು ಹೋಗುತ್ತಿಲ್ಲ ಎಂದು ಒಂಟಿ ಕಾಲಲ್ಲಿ ಕುಂಟುತ್ತಾ ಆಳದ ನೀರಿನಲ್ಲಿ ರೋಧಿಸಿ ತನ್ನ ಮಾಲೀಕನ ಹಿಂದೆ ಬಿಟ್ಟು ಹೋಗಬೇಡ ಎಂಬಂತೆ ನಾಯಿ ಓಡುತ್ತಾ ಹೋಗುವ ದೃಶ್ಯ ಎಂತವರನ್ನೂ ಕಣ್ಣೀರು ತರಿಸುವಂತಿತ್ತು.

ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಾಲೀಕ, ನಾಯಿಗೆ ತನ್ನ ಮನೆ ಸಿಗುತ್ತಿಲ್ಲ. ಪ್ರವಾಹಕ್ಕೆ ಪ್ರಾಣಿಗಳು ನೀರಿನಲ್ಲಿ ಕೊಚ್ಚಿ ಹೋಗುತ್ತಿವೆ. ನಾವು ಬೋಟ್‍ನಲ್ಲಿ ಹೇಗೋ ಹೋಗುತ್ತೇವೆ. ಆದರೆ ನಾಯಿಯನ್ನು ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಮನೆ ಕೊಚ್ಚಿ ಹೋಗುವಂತಾಗಿದ್ದು, ನಮಗೆ ಭಯ ಶುರುವಾಗಿದೆ. ನಾಯಿಗೆ ಎಲ್ಲಿಯೂ ಹೋಗಿ ಅಭ್ಯಾಸ ಇಲ್ಲ. ಅಲ್ಲದೆ ಅದಕ್ಕೆ ಈಜುವುದಕ್ಕೂ ಬರಲ್ಲ. ಹೀಗಾಗಿ ನಾಯಿಯನ್ನು ಇಲ್ಲಿಯೇ ಬಿಟ್ಟು ಹೋಗುತ್ತಿದ್ದೇವೆ ಎಂದು ಕಣ್ಣೀರು ಹಾಕಿದ್ದಾರೆ.

Comments

Leave a Reply

Your email address will not be published. Required fields are marked *