ಮಲಗಿದ್ದ ಪತ್ನಿ ಮಕ್ಕಳನ್ನ ಕೊಂದು ವಾಟ್ಸಪ್‍ಗೆ ವಿಡಿಯೋ ಅಪ್ಲೋಡ್

ಲಕ್ನೋ: ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಮೂವರು ಮಕ್ಕಳು ಮಲಗಿದ್ದಾಗ ಕೊಲೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಘಜಿಯಾಬಾದ್‍ನಲ್ಲಿ ನಡೆದಿದೆ.

ಈ ಘಟನೆ ಇಂದ್ರಪುರಂನ ಜ್ಞಾನಖಾಂಡ್‍ನಲ್ಲಿ ನಡೆದಿದ್ದು, ಆರೋಪಿ ಕೊಲೆಯ ನಂತರ ವಿಡಿಯೋ ಮಾಡಿ ಅದನ್ನು ಕುಟುಂಬದ ವಾಟ್ಸಪ್ ಗ್ರೂಪಿನಲ್ಲಿ ಪೋಸ್ಟ್ ಮಾಡಿದ್ದಾನೆ. ವಿಡಿಯೋದಲ್ಲಿ, ಆರೋಪಿ ತಾನು ಮಾಡಿದ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಜೊತೆಗೆ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಹೋಗುತ್ತಿದ್ದೇನೆ ಎಂದು ಹೇಳಿದ್ದಾನೆ.

ಏನಿದು ಪ್ರಕರಣ?
ಆರೋಪಿ ಒಬ್ಬ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು, ಕಳೆದ ಕೆಲವು ತಿಂಗಳುಗಳಿಂದ ಕೆಲಸವಿಲ್ಲದೆ ಮನೆಯಲ್ಲಿಯೇ ಇದ್ದಿದರಿಂದ ಖಿನ್ನತೆಗೆ ಒಳಗಾಗಿದ್ದನು ಎಂದು ಕುಟುಂಬದವರು ಹೇಳಿದ್ದಾರೆ.

ಆರೋಪಿ ಪತ್ನಿ ಜೊತೆ ಪ್ರತಿದಿನವೂ ಜಗಳವಾಡುತ್ತಿದ್ದನು. ಈ ಹಿನ್ನೆಲೆಯಲ್ಲಿ ಜಗಳ ವಿಕೋಪಕ್ಕೆ ತಿರುಗಿ ಪತ್ನಿ ಮತ್ತು ಮೂವರು ಮಕ್ಕಳನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಕೊಲೆ ಮಾಡಿ ಆರೋಪಿ ಕುಟುಂಬದ ವಾಟ್ಸಪ್ ಗ್ರೂಪಿನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದನು. ನಂತರ ಕುಟುಂಬದವರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆರೋಪಿ, ಪತ್ನಿ ಮತ್ತು ಮಕ್ಕಳು ನಿದ್ದೆ ಮಾಡುವಾಗ ಕೊಲೆ ಮಾಡಿದ್ದಾನೆ. ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದೇವೆ. ಇನ್ನೂ ಆರೋಪಿಯನ್ನು ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *