ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು- ಆಸ್ತಿಗಾಗಿ ಅಣ್ಣನನ್ನೇ ಕೊಂದ ತಮ್ಮ

ವಿಜಯಪುರ: ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿ ಬಂದಿದ್ದು, ಆಸ್ತಿ ವಿಚಾರಕ್ಕೆ ತಂದೆಯ ಮೊದಲ ಪತ್ನಿಯ ಪುತ್ರ (ಅಣ್ಣನನ್ನೇ) ಕೊಲೆ ಮಾಡಿದ ಅಮಾನವೀಯ ಘಟನೆ ಇಂಡಿ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ನಡೆದಿದೆ.

ಹಲಸಂಗಿ ಗ್ರಾಮದ ಅರ್ಜುನ್ ಡೊಳ್ಳಿ ಕೊಲೆಯಾದ ವ್ಯಕ್ತಿ. ಅಶೋಕ್ ಡೊಳ್ಳಿ ಕೊಲೆ ಮಾಡಿದ ಆರೋಪಿ. ಗ್ರಾಮದಲ್ಲಿಯೇ ಭಾನುವಾರ ಸಂಜೆ ಕೊಲೆಯಾಗಿದ್ದು, ಆರೋಪಿ ಅಶೋಕನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ಆರಂಭಿಸಿದ್ದಾರೆ.

ಏನಿದು ಪ್ರಕರಣ?:
ಅರ್ಜುನ್ ತಂದೆಗೆ ಇಬ್ಬರು ಪತ್ನಿಯರು. ಹೀಗಾಗಿ ಅರ್ಜುನ್ ಡೊಳ್ಳಿ ಹಾಗೂ ಅಶೋಕ ಡೊಳ್ಳಿ ಮಧ್ಯೆ ಆಸ್ತಿ ವಿಚಾರವಾಗಿ ಆಗಾಗ ಜಗಳವಾಗುತ್ತಿತ್ತು. ಅಶೋಕ್ ಇಂದು ತನ್ನ ಸಂಬಂಧಿಕರಾದ ಅಮಸಿದ್ಧ ಡೊಳ್ಳಿ, ಸಂಗಪ್ಪ ಡೊಳ್ಳಿ, ಸ್ನೇಹಿತರಾದ ಗಣಪತಿ ಹೂಗಾರ್ ಮತ್ತು ಮಲ್ಲು ಹೂಗಾರ್ ಎಂಬವರ ಜೊತೆಗೆ ಒಟ್ಟಾಗಿ ಬಂದು ಸಹೋದರ ಅರ್ಜುನ್ ಜೊತೆಗೆ ಗಲಾಟೆ ಮಾಡಿಕೊಂಡಿದ್ದಾನೆ. ಈ ವೇಳೆ ಅಶೋಕ್ ತನ್ನ ಬಳಿಯಿದ್ದ ಲೈಸನ್ಸ್ ರಿವಾಲ್ವರ್ ನಿಂದ ಅರ್ಜುನ್ ಮೇಲೆ ಗುಂಡು ಹಾರಿಸಿದ್ದಾನೆ. ಅಷ್ಟಕ್ಕೆ ಬಿಡದೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಚ್ಚಿ ಕೊಲೆ ಮಾಡಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕೊಲೆಯಿಂದಾಗಿ ಹಲಸಂಗಿ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಝಳಕಿ ಠಾಣೆ ಪೊಲೀಸರು, ಅಶೋಕ್‍ನನ್ನು ಬಂಧಿಸಿ ರಿವಾಲ್ವರ್ ಅನ್ನು ವಶಕ್ಕೆ ಪಡೆದಿದ್ದಾರೆ. ಉಳಿದ ಆರೋಪಿಗಳಾದ ಅಮಸಿದ್ಧ ಡೊಳ್ಳಿ, ಸಂಗಪ್ಪ ಡೊಳ್ಳಿ, ಗಣಪತಿ ಹೂಗಾರ್ ಹಾಗೂ ಮಲ್ಲು ಹೂಗಾರ್ ಪರಾರಿಯಾಗಿದ್ದು, ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಈ ಸಂಬಂಧ ಝಳಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *