ಗುಜರಾತ್‌ | 5 ವರ್ಷದ ಬಾಲಕಿಯ ನರಬಲಿ – ದೇವಾಲಯದ ಮೆಟ್ಟಿಲುಗಳ ಮೇಲೆ ರಕ್ತ ಅರ್ಪಿಸಿದ ಪಾಪಿ!

ಗಾಂಧಿನಗರ: ವ್ಯಕ್ತಿಯೊಬ್ಬ ಐದು ವರ್ಷದ ಬಾಲಕಿಯ ಕತ್ತು ಸೀಳಿ ಕೊಲೆ ಮಾಡಿ, ದೇವಾಲಯದ (Temple) ಮೆಟ್ಟಿಲುಗಳ ಮೇಲೆ ರಕ್ತ ಅರ್ಪಿಸಿದ ಘಟನೆ ಗುಜರಾತ್‌ನ (Gujarat) ಛೋಟೌದೇಪುರ ಜಿಲ್ಲೆಯಲ್ಲಿ ನಡೆದಿದೆ.

ಹತ್ಯೆಗೈದ ಆರೋಪಿನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಆರೋಪಿ ಲಾಲಾ ತಡ್ವಿ ಎಂದು ಗುರುತಿಸಲಾಗಿದೆ. ಆರೋಪಿ, ಬುಡಕಟ್ಟು ಪ್ರಾಬಲ್ಯ ಹೊಂದಿರುವ ಜಿಲ್ಲೆ ಪನೇಜ್ ಗ್ರಾಮದಲ್ಲಿ ಬೆಳಿಗ್ಗೆ ಆಕೆಯ ತಾಯಿಯ ಎದುರೇ ಬಾಲಕಿಯನ್ನು ಆಕೆಯ ಮನೆಯಿಂದ ಅಪಹರಿಸಿದ್ದಾನೆ. ಬಳಿಕ ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದು, ಕೊಡಲಿಯಿಂದ ಆಕೆಯ ಕುತ್ತಿಗೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಬಳಿಕ ಬಾಲಕಿಯ ಕುತ್ತಿಗೆಯಿಂದ ಹೊರಬರುತ್ತಿದ್ದ ರಕ್ತವನ್ನು ಸಂಗ್ರಹಿಸಿ, ಅದರಲ್ಲಿ ಸ್ವಲ್ಪ ಭಾಗವನ್ನು ತನ್ನ ಮನೆಯಲ್ಲಿರುವ ದೇವಾಲಯದ ಮೆಟ್ಟಿಲುಗಳ ಮೇಲೆ ಅರ್ಪಿಸಿದ್ದಾನೆ ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಗೌರವ್ ಅಗರ್‌ವಾಲ್ ತಿಳಿಸಿದ್ದಾರೆ.

ಆರೋಪಿಯು ಮಾಂತ್ರಿಕನಂತೆ ಕಾಣುತ್ತಿಲ್ಲ, ಮತ್ತು ಕೊಲೆಯ ಹಿಂದಿನ ನಿಖರವಾದ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ. ಆತ ಮಾನಸಿಕವಾಗಿ ಅಸ್ವಸ್ಥನಂತೆ ಕಾಣುತ್ತಾನೆ ಎಂದು ಅವರು ಹೇಳಿದ್ದಾರೆ.

ಬಾಲಕಿಯ ಕುಟುಂಬದ ದೂರಿನ ಮೇರೆಗೆ, ಕೊಲೆ ಮತ್ತು ಅಪಹರಣಕ್ಕೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತಾದ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.