ಝೂನಲ್ಲಿ ಬೇಲಿ ಹಾರಿ ಸಿಂಹಗಳಿದ್ದ ಸ್ಥಳಕ್ಕೆ ಜಿಗಿದ ವ್ಯಕ್ತಿ! – ವಿಡಿಯೋ ನೋಡಿ

ತಿರುವನಂತಪುರಂ: ವ್ಯಕ್ತಿಯೊಬ್ಬ ಮೃಗಾಲಯದಲ್ಲಿ ಬೇಲಿ ಹಾರಿ ಸಿಂಹಗಳಿದ್ದ ಸ್ಥಳಕ್ಕೆ ಹೋಗಿದ್ದು, ಅಲ್ಲಿಂದ ಅವುಗಳ ಬೋನಿನೆಡೆಗೆ ಹೋಗಲು ಯತ್ನಿಸಿದ ಘಟನೆ ಬುಧವಾರದಂದು ತಿರುವನಂತಪುರಂನಲ್ಲಿ ನಡೆದಿದೆ.

ಮೃಗಾಲಯದ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಹೋಗಿ ಆ ವ್ಯಕ್ತಿಯನ್ನ ಅಲ್ಲಿಂದ ಎಳೆದುಕೊಂಡು ಬಂದಿದ್ದಾರೆ. ಮೃಗಾಲಯಕ್ಕೆ ಭೇಟಿ ನೀಡಿದ ಪ್ರವಾಸಿಗರು ಈ ದೃಶ್ಯವನ್ನ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದು, ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.

ಇಲ್ಲಿನ ಪಲಕ್ಕಾಡ್ ನಿವಾಸಿಯಾದ ಮುರುಗನ್ ಅಂಬೆಗಾಲಿಟ್ಟುಕೊಂಡು ಸಿಂಹಗಳಿದ್ದ ಸ್ಥಳವನ್ನ ಪ್ರವೇಶಿಸಿದ್ದಾನೆ. ಬಳಿಕ ಅವುಗಳ ಬೋನಿನ ಕಡೆ ಹೋಗುವ ಸಂದರ್ಭದಲ್ಲಿ ಪ್ರವಾಸಿಗರು ಗಮನಿಸಿದ್ದು, ಕ್ಷಣಕಾಲ ದಂಗಾಗಿ ತಮ್ಮಲ್ಲೇ ಮಾತಾಡಿಕೊಂಡಿದ್ದಾರೆ.

ಕೂಡಲೇ ಮೃಗಾಲಯದ ಸಿಬ್ಬಂದಿ ಅಲ್ಲಿಗೆ ಬಂದು ಮುರುಗನ್‍ನನ್ನು ಎಳೆದುಕೊಂಡು ಬಂದಿದ್ದಾರೆ. ಈ ಸಂದರ್ಭದಲ್ಲಿ ಸಿಂಹಗಳು ಹೊರಗಿದ್ದವಾ ಅಥವಾ ಬೋನಿನಲ್ಲಿ ಇರಿಸಲಾಗಿತ್ತಾ ಎಂಬುದು ವಿಡಿಯೋದಿಂದ ಗೊತ್ತಾಗಿಲ್ಲ.

ವರದಿಗಳ ಪ್ರಕಾರ ಮುರುಗನ್ ಕಾಣೆಯಾಗಿದ್ದ ಬಗ್ಗೆ ಆತನ ಕುಟುಂಬಸ್ಥರು ಸ್ಥಳೀಯ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದರು.

2014ರಲ್ಲಿ ದೆಹಲಿಯ ಮೃಗಾಲಯದಲ್ಲಿ ಮಕ್ಸೂದ್ ಎಂಬ ವ್ಯಕ್ತಿ ಬಿಳಿ ಹುಲಿಗಳಿದ್ದ ಸ್ಥಳಕ್ಕೆ ಹತ್ತಿ ಹೋಗಿ ಹುಲಿ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದ.

Comments

Leave a Reply

Your email address will not be published. Required fields are marked *