ಪರಿಹಾರ ಸಾಮಾಗ್ರಿಯನ್ನು ಅಕ್ರಮವಾಗಿ ಮನೆಗೆ ಸಾಗಿಸುತ್ತಿದ್ದವನಿಗೆ ಸಂತ್ರಸ್ತರಿಂದ ಕ್ಲಾಸ್

ಬಾಗಲಕೋಟೆ: ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದಾಗ ಸಂತ್ರಸ್ತರಿಗಾಗಿ ರಾಜ್ಯದ ಹಲವೆಡೆಯಿಂದ ದಾನಿಗಳು ಪರಿಹಾರ ಸಾಮಾಗ್ರಿಗಳನ್ನು ಕೊಟ್ಟು ಸಹಾಯ ಹಸ್ತ ಚಾಚಿದ್ದರು. ಆದರೆ ಈ ಸಾಮಾಗ್ರಿಗಳನ್ನು ಸಂತ್ರಸ್ತರಿಗೆ ನೀಡದೆ ವ್ಯಕ್ತಿಯೊಬ್ಬ ಅಕ್ರಮವಾಗಿ ತನ್ನ ಮನೆಯಲ್ಲಿ ಸಂಗ್ರಹಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಜಿಲ್ಲೆಯ ಜಮಖಂಡಿ ತಾಲೂಕಿನ ಹಿರೆಪಡಸಲಗಿ ಗ್ರಾಮದ ನಿವಾಸಿ ಪ್ರಕಾಶ್ ಮೇಲಿನಮನಿ ಸಂತ್ರಸ್ತರಿಗೆ ದಾನಿಗಳು ಕೊಟ್ಟ ಪರಿಹಾರ ಸಾಮಗ್ರಿಯನ್ನು ಅಕ್ರಮವಾಗಿ ತನ್ನ ಮನೆಗೆ ಸಾಗಿಸುತ್ತಿದ್ದನು. ಈ ವೇಳೆ ಇದನ್ನು ಕಂಡ ಸಂತ್ರಸ್ತ ಮಹಿಳೆಯರು ಸಾಮಾಗ್ರಿಗಳನ್ನು ಸಾಗಿಸುತ್ತಿದ್ದ ವಾಹನಕ್ಕೆ ಮುತ್ತಿಗೆ ಹಾಕಿ, ಪ್ರಕಾಶ್‍ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಂತ್ರಸ್ತರಿಗೆ ಕೊಟ್ಟಿದ್ದ ಹಾಸಿಗೆ, ಹೊದಿಕೆ, ಧಾನ್ಯ ಸೇರಿದಂತೆ ವಿವಿಧ ವಸ್ತುಗಳನ್ನು ಪ್ರಕಾಶ್ ಅಕ್ರಮವಾಗಿ ತನ್ನ ಮನೆಗೆ ವಾಹನದಲ್ಲಿ ಸಾಗಿಸುತ್ತಿದ್ದಾನೆ. ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸಾಮಾಗ್ರಿಗಳನ್ನು ನೀಡುವ ಬದಲಿಗೆ ತನ್ನ ಸ್ವಾರ್ಥಕ್ಕೆ ಅದನ್ನು ಉಪಯೋಗಿಸಿಕೊಳ್ಳುತ್ತಿದ್ದಾನೆ. ಮಾನವೀಯತೆ ಮರೆತು ಸಂತ್ರಸ್ತರಿಗೆ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ನಿರಾಶ್ರಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಕ್ರಮವಾಗಿ ಸಾಗಿಸುತ್ತಿದ್ದ ಸಾಮಾಗ್ರಿಗಳನ್ನು ಸಂತ್ರಸ್ತರೇ ಹಂಚಿಕೊಂಡಿದ್ದಾರೆ. ಹಾಗೆಯೇ ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಂಡು ಸಂತ್ರಸ್ತರಿಗೆ ಪರಿಹಾರ ಸಾಮಾಗ್ರಿ ತಲುಪಿಸಬೇಕು, ಈ ರೀತಿಯ ಅಕ್ರಮವನ್ನು ತಡೆಯಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *