ಲವ್ವರ್ ಜೊತೆ ಮದ್ವೆಯಾಗುವಂತೆ ಪತ್ನಿಗೆ ಹೇಳಿ ಪತಿ ಆತ್ಮಹತ್ಯೆ!

ಹೈದರಾಬಾದ್: ಪತ್ನಿಯ ಅನೈತಿಕ ಸಂಬಂಧದಿಂದ ಬೇಸತ್ತ ಪತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಶಮೀರ್‍ಪೆಟ್ ನಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು 24 ವರ್ಷದ ಕೆ ಆಚಾರ್ಯ ಎಂದು ಗುರುತಿಸಲಾಗಿದ್ದು, ಇವರು ಯದಾದ್ರಿ ಭೊಂಗಿರ್ ಜಿಲ್ಲೆಯ ಅಲೈರ್ ಮಂಡಲ್ ನಿವಾಸಿ. ಆತ್ಮಹತ್ಯೆಗೂ ಮುನ್ನ ಆಚಾರ್ಯ ಡೆತ್ ನೋಟ್ ಬರೆದಿದ್ದು, ಅದರಲ್ಲಿ ತನ್ನ ಹೆಂಡತಿಯನ್ನು ಆಕೆಯ ಪ್ರಿಯತಮನ ಜೊತೆ ಮದುವೆ ಮಾಡಿಸಿ ಅಂತ ಹೆತ್ತವರಿಗೆ ಹೇಳಿದ್ದಾರೆ.

ಏನಿದು ಘಟನೆ?:
ಎರಡು ವರ್ಷದ ಹಿಂದೆ ಆಚಾರ್ಯ ಅವರು ಉಷಾ ರಾಣಿ ಎಂಬಾಕೆಯನ್ನು ವರಿಸಿದ್ದರು. ದಂಪತಿಗೆ ಈಗಾಗಲೇ 1 ವರ್ಷದ ಮಗುವೂ ಇದೆ. ಕಳೆದ ವರ್ಷವಷ್ಟೇ ಆಚಾರ್ಯ ತನ್ನ ಪತ್ನಿ ಹಾಗೂ ಮಗುವಿನ ಜೊತೆ ಶಮೀರ್ ಪೆಟ್ ನ ತುರ್ಕಪಲ್ಲಿ ಎಂಬಲ್ಲಿ ಬಂದು ನೆಲೆಸಿದ್ದರು. ಅಲ್ಲದೇ ಸ್ಥಳೀಯ ಕಾರ್ಖಾನೆಯೊಂದರಲ್ಲಿ ಎಲೆಕ್ಟ್ರೀಷಿಯನ್ ಆಗಿ ಕೆಲಸ ಮಾಡುತ್ತಿದ್ದರು.

ಬುಧವಾರ ತಂದೆ ಕೆ ಸತ್ಯನಾರಾಯಣ್ ಅವರ ಮೊಬೈಲ್ ಗೆ ಆಚಾರ್ಯ ಮೆಸೇಜ್ ಮಾಡಿದ್ದಾರೆ. ಅದರಲ್ಲಿ ನೆರೆಯಮನೆಯ ಶ್ರೀಕಾಂತ್ ಎಂಬಾತನಿಂದಾಗಿ ಆತ್ಮಹತ್ಯೆಗೆ ಶರಣಾಗುವುದಾಗಿ ತಿಳಿಸಿದ್ದಾರೆ. ಕೂಡಲೇ ಸತ್ಯನಾರಾಯಣ್ ಅವರು ಮಗನಿಗೆ ಕರೆ ಮಾಡಿದ್ದಾರೆ. ಆದ್ರೆ ಆಚಾರ್ಯ ಅದಾಗಲೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಇದರಿಂದ ಆತಂಕಗೊಂಡ ಹೆತ್ತವರು ಆಚಾರ್ಯ ಮನೆಗೆ ದೌಡಾಯಿಸಿದ್ದಾರೆ. ಈ ವೇಳೆ ಮಗ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿರುವುದು ಕಂಡುಬಂದಿದೆ.

ಘಟನೆಯ ಬಳಿಕ ಸ್ಥಳೀಯರು ಜಮಾಯಿಸಿದ್ದು, ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ತಕ್ಷಣಕ್ಕೆ ಪೊಲೀಸರು ಸ್ಥಳಕ್ಕೆ ಬಂದು, ಮರಣೋತ್ತರ ಪರೀಕ್ಷೆಗಾಗಿ ಶವವನ್ನು ರವಾನಿಸಿದ್ರು. ಈ ಸಂಬಂಧ ಇನ್ಸ್ ಪೆಕ್ಟರ್ ಡಿ ಭಾಸ್ಕರ್ ರೆಡ್ಡಿ ಪ್ರತಿಯಿಸಿದ್ದು, ಆಚಾರ್ಯ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ತಮ್ಮ ಪತ್ನಿಗೆ ಶ್ರೀಕಾಂತ್ ಎಂಬಾತನ ಜೊತೆ ಅನೈತಿಕ ಸಂಬಂಧವಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ನನ್ನಂತಹ ಮಗ ಯಾವ ತಂದೆ-ತಾಯಿಗೂ ಹುಟ್ಟಬಾರದು. ಜೀವನದಲ್ಲಿ ಸೋತಿದ್ದೇನೆ ಅಂತ ತಂದೆ-ತಾಯಿ ಬಳಿ ಕ್ಷಮೆ ಕೇಳಿದ್ದಾರೆ. ಹಾಗೆಯೇ ಶ್ರೀಕಾಂತ್ ಜೊತೆ ಪತ್ನಿ ಉಷಾಳಿಗೆ ಮದುವೆ ಮಾಡಿಕೊಡಿ. ಇದು ನನ್ನ ಕೊನೆಯ ಆಸೆ ಆಗಿದೆ. ಅವಳ ಹೆತ್ತವರು ಈ ಬಗ್ಗೆ ಏನೂ ಹೇಳಲಾರರು ಅಂತ ಬರೆದಿರುವುದಾಗಿ ತಿಳಿಸಿದ್ದಾರೆ.

ಸದ್ಯ ಆಚಾರ್ಯ ತಂದೆಯ ದೂರಿನಂತೆ ಪೊಲೀಸರು ಶಂಕಾಸ್ಪದ ಸಾವು ಅಂತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಆಚಾರ್ಯ ಮೃತದೇಹವನ್ನು ಗುರುವಾರ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂಬುದಾಗಿ ವರದಿಯಾಗಿದೆ.

Comments

Leave a Reply

Your email address will not be published. Required fields are marked *