ವಿಡಿಯೋ: ಬೆಂಕಿಯಿಂದ ಧಗಧಗನೆ ಉರಿಯುತ್ತಿದ್ದ ಆಯಿಲ್ ಟ್ಯಾಂಕರನ್ನ ಬಂಕ್‍ನಿಂದ ದೂರ ಡ್ರೈವ್ ಮಾಡಿ ಜನರ ಪ್ರಾಣ ಉಳಿಸಿದ ಚಾಲಕ

ಭೋಪಾಲ್: ಆಯಿಲ್ ಟ್ಯಾಂಕರ್ ನ ಚಾಲಕರೊಬ್ಬರು ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಹಲವಾರು ಜನರ ಪ್ರಾಣ ಉಳಿಸಿದ ಘಟನೆ ಮಧ್ಯಪ್ರದೇಶದ ನರಸಿಂಗ್‍ಪುರ್ ಜಿಲ್ಲೆಯಲ್ಲಿ ನಡೆದಿದೆ.

ತನ್ನ ಸುರಕ್ಷತೆಯನ್ನೇ ಲೆಕ್ಕಿಸದೇ ಚಾಲಕ ಸಾಜಿದ್, ಬೆಂಕಿ ಹೊತ್ತಿಕೊಂಡಿದ್ದ ಆಯಿಲ್ ಟ್ಯಾಂಕರನ್ನ ಪೆಟ್ರೋಲ್ ಬಂಕ್‍ನಿಂದ ದೂರಕ್ಕೆ ಡ್ರೈವ್ ಮಾಡಿಕೊಂಡು ಹೋಗಿದ್ದಾರೆ. ಪೆಟ್ರೋಲ್ ಬಂಕ್‍ನಲ್ಲಿ ಇಂಧನಕ್ಕಾಗಿ ಹಲವಾರು ವಾಹನಗಳು ಸಾಲುಗಟ್ಟಿ ನಿಂತಿದ್ದು, ತನ್ನ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತವನ್ನೇ ಸಾಜಿದ್ ತಪ್ಪಿಸಿದ್ದಾರೆ.

ಪ್ರತ್ಯಕ್ಷದರ್ಶಿಯೊಬ್ಬರು ಘಟನೆಯ ದೃಶ್ಯವನ್ನ ವಿಡಿಯೋ ಮಾಡಿದ್ದು, ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದ ಆಯಿಲ್ ಟ್ಯಾಂಕರ್ ರಸ್ತೆಯಲ್ಲಿ ಬರೋದನ್ನ ನೋಡಿ ಜನ ಗಾಬರಿಗೊಂಡು ಓಡೋದನ್ನ ಕಾಣಬಹುದು. ಈ ವೇಳೆ ಬೈಕ್ ಸವಾರರು ರಸ್ತೆಬದಿ ಆಸರೆ ಪಡೆಯಲು ಯತ್ನಿಸಿದ್ದಾರೆ. ಅಗ್ನಿಶಾಮಕ ವಾಹನ ಬರುವವರೆಗೆ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

 

ಟ್ಯಾಂಕರ್‍ಗೆ ಬೆಂಕಿ ಹೊತ್ತಿಕೊಂಡ ತಕ್ಷಣ ಹೇಗಾದರೂ ಮಾಡಿ ಪೆಟ್ರೋಲ್ ಬಂಕ್‍ನ ಅಂಡರ್‍ಗ್ರೌಂಡ್ ದಾಸ್ತಾನಿನಿಂದ ಅದನ್ನು ದೂರ ಸರಿಸಬೇಕೆಂದು ಯೋಚಿಸಿದೆ. ಒಂದು ವೇಳೆ ದಾಸ್ತಾನು ಪ್ರದೇಶಕ್ಕೆ ಬೆಂಕಿ ಆವರಿಸಿದ್ದರೆ ಘೋರ ದುರಂತವೇ ಸಂಭವಿಸುತ್ತಿತ್ತು ಎಂದು ಸಾಜಿದ್ ಹೇಳಿದ್ದಾರೆ.

ಸಾಜಿದ್ ಅವರಿಗೆ ಕೈ ಮೇಲೆ ಸುಟ್ಟ ಗಾಯಗಳಾಗಿದ್ದು, ನರಸಿಂಗ್‍ಪುರ್‍ನ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಟ್ಯಾಂಕರ್‍ಗೆ ಬೆಂಕಿ ಹೊತ್ತಿಕೊಂಡಿದ್ದು ಹೇಗೆ ಎನ್ನುವುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ.

Comments

Leave a Reply

Your email address will not be published. Required fields are marked *