ವಸಿಷ್ಠ ಸಿಂಹ ಹೆಸ್ರಲ್ಲಿ ನಕಲಿ ಫೇಸ್‍ಬುಕ್ ಖಾತೆ- ಮಹಿಳೆಗೆ 25 ಸಾವಿರ ವಂಚನೆ

ಬೆಂಗಳೂರು: 22 ವರ್ಷದ ವ್ಯಕ್ತಿಯೊಬ್ಬ ನಟ, ಗಾಯಕ ವಸಿಷ್ಠ ಎನ್. ಸಿಂಹ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ಮಹಿಳೆಯೊಬ್ಬರಿಗೆ 25 ಸಾವಿರ ರೂ. ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಪ್ರಕರಣ ಸಂಬಂಧ ನಟ ದೂರು ದಾಖಲಿಸಿದ ಬಳಿಕ ಸುಂಕದಕಟ್ಟೆಯ ಹೊಯ್ಸಳ ನಗರ ನಿವಾಸಿ ವೆಂಕಟೇಶ್ ಬವಸರ್ ನನ್ನು ಸೈಬರ್ ಕ್ರೈಂ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಏನಿದು ಘಟನೆ?:
ಆರೋಪಿ ವೆಂಕಟೇಶ್ ವಸಿಷ್ಠ ಸಿಂಹ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಖಾತೆಯನ್ನು ತೆರೆದಿದ್ದಾನೆ. ಬಳಿಕ ಮಹಿಳೆಯರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಚಾಟ್ ಮಾಡಲು ಆರಂಭಿಸಿದ್ದಾನೆ. ಅಲ್ಲದೆ ಹೀಗೆ ಮಾತಾಡುತ್ತಾ ಅವರಿಗೆ ತನ್ನ ವಾಟ್ಸಾಪ್ ನಂಬರ್ ಕೂಡ ಕಳುಹಿಸಿದ್ದಾನೆ. ಆರೋಪಿ ಕೊಟ್ಟ ನಂಬರನ್ನು ಟ್ರೂ ಕಾಲರ್ ನಲ್ಲಿ ನೋಡಿದಾಗ ಅಲ್ಲಿಯೂ ವಸಿಷ್ಠ ಸಿಂಹ ಅಂತಾನೇ ಬಂದಿರುವುದರಿಂದ ಎಲ್ಲರೂ ನಟ ಅಂತಾನೇ ನಂಬಿದ್ದಾರೆ.

ಹೀಗೆ ಫೇಸ್ ಬುಕ್ ನಲ್ಲಿ ಪರಿಚಯವಾದ ಮಹಿಳೆಯೊಬ್ಬರಿಗೆ ಆರೋಪಿ ನಿಮಗೆ ಸಿನಿಮಾ ಅಥವಾ ಟಿವಿ ಸೀರಿಯಲ್ ನಲ್ಲಿ ನಟನೆ ಮಾಡಲು ಅವಕಾಶ ಮಾಡಿಕೊಡುವುದಾಗಿ ನಂಬಿಸಿದ್ದಾನೆ. ಈ ಮೂಲಕ ಆಕೆಯ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದನು. ಅಲ್ಲದೆ ಡಿಸೆಂಬರ್ ಕೊನೆಯವರೆಗೆ ನಾನು ಯಾವುದೇ ಕರೆಗಳನ್ನು ಸ್ವೀಕರಿಸಲ್ಲ. ಹೀಗಾಗಿ ನಾನು ಮೆಸೇಜ್ ಮಾತ್ರ ಮಾಡುವುದಾಗಿ ಮಹಿಳೆ ಜೊತೆ ಸುಳ್ಳು ಹೇಳಿದ್ದಾನೆ.

ಈ ಮಧ್ಯೆ ಆರೋಪಿ ವೆಂಕಟೇಶ್ ಮಹಿಳೆಗೆ ತನ್ನದೇ ಇನ್ನೊಂದು ನಂಬರ್ ನೀಡಿ, ನನ್ನ ಅಸಿಸ್ಟೆಂಟ್ ವೆಂಕಿ ರಾವ್ ನಂಬರ್ ಎಂದು ಮಹಿಳೆಗೆ ನೀಡಿದ್ದಾನೆ.

ಇತ್ತ ಫಿಲಂ ಇಂಡಸ್ಟ್ರಿ ಅವರ ಪರಿಚಯ ಇದೆ ಎಂದು ನಂಬಿಸಲು ವೆಂಕಿ ರಾವ್ ಮಹಿಳೆಯನ್ನು ಶೂಟಿಂಗ್ ಸ್ಥಳಕ್ಕೂ ಕರೆದುಕೊಂಡು ಹೋಗಿದ್ದಾನೆ. ಹೀಗೆ ಶೂಟಿಂಗ್ ಸ್ಥಳಕ್ಕೆ ಬರುತ್ತಿದ್ದ ಮಹಿಳೆ ಒಂದು ದಿನ ತನ್ನ ಮಗಳನ್ನೂ ಜೊತೆಗೆ ಕರೆದುಕೊಂಡು ಬಂದಿದ್ದರು. ಈ ವೇಳೆ ವೆಂಕಿ, ನಿಮ್ಮ ಜೊತೆ ನಿಮ್ಮ ಮಗಳಿಗೂ ನಟಿಸಲು ಅವಕಾಶ ಕೊಡುವುದಾಗಿ ಹೇಳಿ ಆಕೆಯ ಕೈಯಿಂದ 25,000 ರೂ. ಪೀಕಿಸಿದ್ದಾನೆ.

ವಸಿಷ್ಠ ಸಿಂಹನ ಅಭಿಮಾನಿಯಾಗಿರೋ ಮಹಿಳೆಯಲ್ಲಿ, ವಸಿಷ್ಠ ನಿಮ್ಮ ಮಗಳನ್ನು ಇಷ್ಟ ಪಡುತ್ತಿದ್ದಾರೆ. ಅಲ್ಲದೆ ಆಕೆಯನ್ನು ಮದುವೆ ಕೂಡ ಆಗಲು ನಿರ್ಧರಿಸಿದ್ದಾರೆ ಎಂದು ಮತ್ತೆ ಸುಳ್ಳು ಹೇಳಿದ್ದಾನೆ. ಇಷ್ಟೆಲ್ಲ ಸುಳ್ಳುಗಳನ್ನು ನಂಬಿದ್ದ ಮಹಿಳೆ ಒಂದು ದಿನ ಅಚಾನಕ್ ಆಗಿ ವಿಡಿಯೋ ಕಾಲ್ ಮಾಡಿದ್ದಾರೆ. ಈ ವೇಳೆ ಆತ, ವಸಿಷ್ಠ ಅವರು ರೈಡ್‍ಗೆ ಹೋಗಿದ್ದಾರೆ ಎಂದು ಮಹಿಳೆಯನ್ನು ಮತ್ತೆ ನಂಬಿಸಿದ್ದಾನೆ.

ಇದರಿಂದ ಅನುಮಾನಗೊಂಡ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ವೇಳೆ ವೆಂಕಟೇಶ್ ಗೆ ಕನ್ನಡ ಫಿಲಂ ಹಾಗೂ ಸೀರಿಯಲ್ ಗಳ ಮೇಕಪ್ ಆರ್ಟಿಸ್ಟ್ ಗಳು ಮಾತ್ರ ಪರಿಚಯವಿರುವುದಾಗಿ ಬೆಳಕಿಗೆ ಬಂದಿದೆ.

Comments

Leave a Reply

Your email address will not be published. Required fields are marked *