ಕಾನೂನು ಕಾಪಾಡುವ ಮಹಿಳಾ ಪೊಲೀಸ್ರಿಗಿಲ್ಲ ರಕ್ಷಣೆ – ಮದ್ವೆಯಾಗುವುದಾಗಿ ಲಾಡ್ಜ್ ಗೆ ಕರೆಸಿ ಲೈಂಗಿಕ ದೌರ್ಜನ್ಯ

ಬೆಂಗಳೂರು: ನಗರದಲ್ಲಿ ಕಾನೂನು ಕಾಪಾಡುವ ಪೊಲೀಸರಿಗೇ ರಕ್ಷಣೆ ಇಲ್ಲದಂತಾಗಿದ್ದು, ಕೀಚಕನೊಬ್ಬ ಮಹಿಳಾ ಪೊಲೀಸ್ ಪೇದೆಯನ್ನೇ ವಂಚಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ನಡೆದಿದೆ.

ಸಂತ್ರಸ್ತೆ ಬೆಂಗಳೂರು ನಗರದ ಪೊಲೀಸ್ ಠಾಣೆಯೊಂದರಲ್ಲಿ ಪೇದೆಯಾಗಿದ್ದು, ಬಾಗಲಕೋಟೆಯ ಜಮಖಂಡಿ ಮೂಲದ ಅಮೀನ್ ಸಾಬ್ ಮದುವೆಯಾಗುವುದಾಗಿ ನಂಬಿಸಿ ಮಹಿಳಾ ಪೇದೆ ಮೇಲೆ ದೌರ್ಜನ್ಯ ಎಸಗಿದ್ದಾನೆ.

ಆರೋಪಿ ಅಮೀನ್ ಸಾಬ್ ಕಳೆದ ಮೂರು ವರ್ಷದಿಂದ ಮದುವೆಯಾಗುವುದಾಗಿ ನಂಬಿಸಿ ಪ್ರೀತಿ ಮಾಡುತ್ತಿದ್ದನು. 2015 ರಲ್ಲಿ ವಿಜಯಪುರದಲ್ಲಿ ಕೆಎಎಸ್ ಮತ್ತು ಪಿಎಸ್‍ಐ ಕೋಚಿಂಗ್ ವೇಳೆ ಮಹಿಳಾ ಪೇದೆ ಮತ್ತು ಅಮೀನ್ ಸಾಬ್ ಪರಿಚಯವಾಗಿತ್ತು. ನಂತರ ಮದುವೆಯಾಗುವುದಾಗಿ ಹೇಳಿ ಬೆಂಗಳೂರಿನ ಉಪ್ಪಾರಪೇಟೆಯ ಲಾಡ್ಜ್ ಗೆ ಕರೆದಿದ್ದಾನೆ. ಅಲ್ಲಿ ಸಂತ್ರಸ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಸಂತ್ರಸ್ತೆ ಮದುವೆ ಬಗ್ಗೆ ಪ್ರಸ್ತಾಪ ಮಾಡಿದಾಗ ಆರೋಪಿ ಜಾತಿ, ಧರ್ಮದ ನೆಪವೊಡ್ಡಿ ಮದುವೆಯಾಗಲು ನಿರಾಕರಣೆ ಮಾಡಿದ್ದಾನೆ. ಸದ್ಯ ಈಕೆ ಕಾಮುಕನ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಷ್ಟೇ ಅಲ್ಲದೇ ಅಮೀನ್ ಸಾಬ್ ಕುಟುಂಬದವರಿಂದ ಜೀವ ಬೆದರಿಕೆ ಬಂದಿದೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಈ ಕುರಿತು ಆರೋಪಿ ವಿರುದ್ಧ ಉಪ್ಪಾರಪೇಟೆ ಠಾಣೆಯಲ್ಲಿ ಅತ್ಯಾಚಾರ ಮತ್ತು ಜಾತಿನಿಂದನೆ ಅಡಿಯಲ್ಲಿ ದೂರು ದಾಖಲಾಗಿದೆ. ಇತ್ತ ದೂರು ದಾಖಲಾಗುತ್ತಿದ್ದಂತೆಯೇ ಆರೋಪಿ ಅಮೀನ್ ಸಾಬ್ ನಾಪತ್ತೆಯಾಗಿದ್ದು, ಉಪ್ಪಾರಪೇಟೆ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *