ಟೋಲ್ ಕಿರಿಕಿರಿ- ಕಾರ್ ನಂಬರ್ ಪ್ಲೇಟನ್ನೇ ‘ಎಪಿ ಸಿಎಂ ಜಗನ್’ ಎಂದು ಬದಲಿಸಿದ ಭೂಪ

ಹೈದರಾಬಾದ್: ಟೋಲ್ ಅಥವಾ ಪಾರ್ಕಿಂಗ್ ಶುಲ್ಕ ಪಾವತಿಸುವುದನ್ನು ತಪ್ಪಿಸಲು ಅನೇಕ ವಾಹನ ಸವಾರರು ಪೊಲೀಸ್, ಪ್ರೆಸ್, ನ್ಯಾಯಾಧೀಶರು ಅಥವಾ ಶಾಸಕರ ಸ್ಟಿಕ್ಕರ್ ಗಳನ್ನು ಬಳಸುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿಯ ಐಡಿಯಾ ನೋಡಿ ಪೊಲೀಸರು ಬೆಚ್ಚಿಬಿದ್ದಿದ್ದಾರೆ.

ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ನಿವಾಸಿ ಎಂ.ಹರಿ ರಾಕೇಶ್, ಟೋಲ್ ಶುಲ್ಕ ಕಟ್ಟುವುದನ್ನು ತಪ್ಪಿಸಿಕೊಳ್ಳಲು ತನ್ನ ಕಾರ್ ನಂಬರ್ ಪ್ಲೇಟನ್ನೇ ‘ಎಪಿ ಸಿಎಂ ಜಗನ್’ ಎಂದು ಬದಲಾಯಿಸಿಕೊಂಡಿದ್ದಾನೆ. ಕೇವಲ ಕಾರ್ ಮೇಲೆ ಸ್ಟಿಕ್ಕರ್ ಮಾತ್ರ ಅಂಟಿಸಿಕೊಂಡಿಲ್ಲ. ಬದಲಿಗೆ ಮುಂಭಾಗ ಹಾಗೂ ಹಿಂಭಾಗದ ನಂಬರ್ ಪ್ಲೇಟನ್ನು ‘ಎಪಿ ಸಿಎಂ ಜಗನ್’ ಎಂದು ಬದಲಾಯಿಸಿಕೊಂಡಿದ್ದಾನೆ.

ಜಡಿಮೆಟ್ಲಾದಲ್ಲಿ ಟ್ರಾಫಿಕ್ ಪೊಲೀಸರು ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ವೇಳೆ ಈತ ಸಿಕ್ಕಿ ಬಿದ್ದಿದ್ದಾನೆ. ಈ ವೇಳೆ ಪೊಲೀಸರು ಈತನನ್ನು ವಿಚಾರಣೆ ನಡೆಸಿದ್ದು, ಟೋಲ್ ತೆರಿಗೆ ಪಾವತಿಸುವುದರಿಂದ ವಿನಾಯಿತಿ ಪಡೆಯಲು ಹಾಗೂ ಸಂಚಾರಿ ಪೊಲೀಸರ ತಪಾಸಣೆಯಿಂದ ತಪ್ಪಿಸಲು ಈ ರೀತಿ ಮಾಡಿರುವುದಾಗಿ ತಿಳಿಸಿದ್ದಾನೆ.

ಪೊಲೀಸರು ಕಾರನ್ನು ವಶಪಡಿಸಿಕೊಂಡಿದ್ದು, ರಾಕೇಶ್ ವಿರುದ್ಧ ಮೋಸ ಹಾಗೂ ವಂಚನೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *