ಕುಂಭ ರಾಶಿಯ ಮಹಿಳೆಯನ್ನು ಬಲಿಕೊಟ್ಟರೆ ನಿಧಿ ಸಿಗುತ್ತೆ- ಪತಿಯಿಂದ ಪತ್ನಿ ಬಲಿಗೆ ಸಂಚು

ಬೆಂಗಳೂರು: ನಿಧಿ ಆಸೆಗಾಗಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಬಲಿ ಪಡೆಯಲು ಸಂಚು ರೂಪಿಸಿರುವ ಘಟನೆ ನಗರದ ಉಳ್ಳಾಲದಲ್ಲಿ ನಡೆದಿದೆ.

ಮಹಾಲಿಂಗೇಶ್ ನಿಧಿ ಆಸೆಗಾಗಿ ಪತ್ನಿಯನ್ನು ಬಲಿ ಕೊಡಲು ಸಂಚು ರೂಪಿಸಿದ್ದ ಆರೋಪಿ. ಕುಂಭ ರಾಶಿಯ ಮಹಿಳೆಯನ್ನು ಬಲಿಕೊಟ್ಟರೆ ನಿಧಿ ಸಿಗುತ್ತೆ ಎಂಬ ವದಂತಿ ಹಿನ್ನೆಲೆ ಪತ್ನಿ ಸವಿತಾರನ್ನು ಬಲಿಕೊಡಲು ಸಿದ್ಧತೆ ನಡೆಸಿದ್ದ.

ಈ ಕುರಿತು ಮಾಹಿತಿ ಪಡೆದ ಸವಿತಾ ಅವರು ಗಂಡನಿಂದ ರಕ್ಷಣೆ ಪಡೆಯಲು ಮಹಿಳಾ ಆಯೊಗದ ಮೊರೆ ಹೋಗಿದ್ದಾರೆ. ಮಹಿಳಾ ಆಯೋಗದ ಮಾಹಿತಿ ಮೇರೆಗೆ ಪೊಲೀಸರು ಮಹಾಲಿಂಗೇಶ್ ನನ್ನು ಬಂಧಿಸಿದ್ದಾರೆ.

ಏನಿದು ಪ್ರಕರಣ?: ಕಳೆದ 15 ವರ್ಷಗಳ ಹಿಂದೆ ಮಹಾಲಿಂಗೇಶ್ ಹಾಗೂ ಸವಿತಾರ ಮದುವೆಯಾಗಿತ್ತು. ಇಬ್ಬರ ದಾಂಪತ್ಯ ಜೀವನಕ್ಕೆ ಮೂವರು ಹೆಣ್ಣು ಮಕ್ಕಳು ಸಾಕ್ಷಿಯಾಗಿದ್ದಾರೆ. ಆದರೆ ಪತ್ನಿ ಮೂವರು ಹೆಣ್ಣು ಮಕ್ಕಳನ್ನು ಹೆತ್ತ ಕಾರಣದಿಂದ ಮಹಾಲಿಂಗೇಶ್ ಕಿರುಕುಳ ನೀಡುತ್ತಿದ್ದ. ಅಲ್ಲದೇ ಉಳ್ಳಾಲ ಬಳಿ 7 ವರ್ಷಗಳ ಹಿಂದೆ ದೇವಾಲಯವನ್ನು ನಿರ್ಮಾಣ ಮಾಡಿರುವ ಮಹಾಲಿಂಗೇಶ್ ನಿಧಿ ಆಸೆಗಾಗಿ ಸಂಚು ರೂಪಿಸಿದ್ದ ಎನ್ನಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಪತ್ನಿ ಸವಿತಾ, ತನ್ನ ಪತಿಗೆ ಈ ಕೃತ್ಯ ಸಂಚು ರೂಪಿಸಲು ಮಾರ್ಥಂಡ ಎಂಬಾತ ಬೆಂಬಲ ನೀಡುತ್ತಿದ್ದಾನೆ. ಅವರ ಮಾತಿನ ಹಿನ್ನೆಲೆಯಲ್ಲಿ ತನಗೆ ಕಿರುಕುಳ ನೀಡಲು ಆರಂಭಿಸಿದ್ದ. ಅಲ್ಲದೇ ವದರಕ್ಷಿಣೆ ತರುವಂತೆ ಹಿಂಸೆ ನೀಡಿದ್ದ. ಕಿರುಕುಳ ತಡೆಯಲು ಸಾಧ್ಯವಾಗದೆ 27 ಲಕ್ಷ ರೂ. ನೀಡಿದ್ದೇನೆ. ತನ್ನ ತಂಗಿಯನ್ನು ಮದುವೆ ಮಾಡಿಕೊಡಲು ಒತ್ತಡ ಹಾಕಿದ್ದ. ಪತಿ ತನ್ನ ತಂದೆ ತಾಯಿಗೂ ಹಿಂಸೆ ನೀಡಿ ಅವರ ಮೇಲೂ ಹಲ್ಲೆ ನಡೆಸುತ್ತಿದ್ದ, ಹಲವು ಬಾರಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಮಕ್ಕಳಿಗೂ ಸಹ ನನ್ನ ಬಗ್ಗೆ ಕೆಟ್ಟ ಭಾವನೆ ಮೂಡುವ ರೀತಿ ಮಾಡಿ ದೂರ ಮಾಡಿದ್ದ ಎಂದು ತಿಳಿಸಿದ್ದಾರೆ.

ದೇವಾಲಯದಲ್ಲೇ ಗುಂಡಿ: ಪತ್ನಿ ಕುಂಭ ರಾಶಿ ಆಗಿದ್ದ ಕಾರಣ ಆಕೆಯನ್ನು ಬಲಿ ಕೊಡಲು ಗುಂಡಿಯನ್ನು ನಿರ್ಮಾಣ ಮಾಡಿದ್ದ. ಪ್ರತಿದಿನ ಆ ಸ್ಥಳದಲ್ಲಿ ಪೂಜೆ ನಡೆಸುತ್ತಿದ್ದ. ಅಮವಾಸೆ ವೇಳೆ ಪತ್ನಿಯನ್ನು ಬಲಿ ನೀಡಿ ಗುಂಡಿಯಲ್ಲಿ ಮುಚ್ಚಿದರೆ ನಿಧಿ ದೊರೆಯುತ್ತದೆ ಎಂಬ ವದಂತಿಯ ಮೇಲೆ ಈ ಕೃತ್ಯ ನಡೆಸಲು ಮುಂದಾಗಿದ್ದ. ಈ ಕುರಿತು ಸವಿತಾ ಬಳಿ ಪತಿಯೇ ಮಾಹಿತಿ ನೀಡಿದ್ದು, ನಿನ್ನನ್ನು ಬಲಿ ನೀಡಿ ಆಪಾರ ಆಸ್ತಿ ಪಡೆಯುತ್ತೇನೆ. ಈ ವೇಳೆ ತಾನು ಜೈಲಿಗೆ ಹೋದರು ಸರಿ ಹಣದ ಬಲದಿಂದ ಹೊರಬರುತ್ತೇನೆ ಎಂದು ಹೇಳಿದ್ದ ಎಂದು ಸವಿತಾ ತಿಳಿಸಿದ್ದಾರೆ.

https://www.youtube.com/watch?v=WFiU2igakfA

Comments

Leave a Reply

Your email address will not be published. Required fields are marked *