ಮತ್ತೆ ಒಂದಾದ ಮಮ್ಮುಟ್ಟಿ, ನಯನತಾರಾ ಜೋಡಿ

ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ (Nayanthara) ಹಲವು ವರ್ಷಗಳ ನಂತರ ಹೊಸ ಚಿತ್ರಕ್ಕಾಗಿ ಮಾಲಿವುಡ್‌ನತ್ತ ಮುಖ ಮಾಡಿದ್ದಾರೆ. ಮಮ್ಮುಟ್ಟಿ ಹೊಸ ಸಿನಿಮಾಗೆ ನಯನತಾರಾ ನಾಯಕಿಯಾಗಿ ನಟಿಸುವ ಸುದ್ದಿಯೊಂದು ಭಾರೀ ಚರ್ಚೆಯಾಗುತ್ತಿದೆ.

ಶಾರುಖ್ ಖಾನ್‌ಗೆ ನಾಯಕಿಯಾಗಿ ‘ಜವಾನ್’ (Jawan) ಸಿನಿಮಾದಲ್ಲಿ ನಟಿಸಿದ ಮೇಲೆ ನಯನತಾರಾ ಬೇಡಿಕೆ ಹೆಚ್ಚಾಗಿದೆ. ಇದೀಗ ಜವಾನ್‌ ನಂತರ ಮಲಯಾಳಂನಲ್ಲಿ ನಟಿಸಲು ಆಫರ್‌ ಅರಸಿ ಬಂದಿದೆ. ಮಮ್ಮುಟ್ಟಿಗೆ ನಯನತಾರಾ ನಾಯಕಿಯಾಗಲು ಮತ್ತೊಮ್ಮೆ ಅವಕಾಶ ಸಿಕ್ಕಿದೆ ಎಂಬ ಸುದ್ದಿ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.

ನಯನತಾರಾ ಮತ್ತು ಮಮ್ಮುಟ್ಟಿ (Mammootty) ಈ ಜೋಡಿಯನ್ನು ಜೊತೆಯಾಗಿ ಸಿನಿಮಾದಲ್ಲಿ ತೋರಿಸಬೇಕು ಎಂದು ಹಿರಿಯ ನಿರ್ದೇಶಕ ಗೌತಮ್ ವಾಸುದೇವ್ ಮೆನನ್ ಪ್ಲ್ಯಾನ್ ಮಾಡಿದ್ದಾರೆ. ಈ ಚಿತ್ರದ ಬಗ್ಗೆ ಒಂದು ಹಂತದ ಮಾತುಕತೆ ಕೂಡ ನಡೆದಿದೆ ಎನ್ನಲಾಗಿದೆ. ಈ ವಿಚಾರದ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ನೀಡುವವರೆಗೂ ಕಾಯಬೇಕಿದೆ.

2005ರಲ್ಲಿ ‘ರಪ್ಪಕಲ್’ (Rappakal) ಎಂಬ ಸಿನಿಮಾದಲ್ಲಿ ನಯನತಾರಾ ಮತ್ತು ಮಮ್ಮುಟ್ಟಿ ಜೋಡಿಯಾಗಿ ನಟಿಸಿದ್ದರು. ಭಾಸ್ಕರ್‌ ದಿ ರಾಸ್ಕಲ್‌ ಸೇರಿದಂತೆ ಹಲವು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ.