ಪೆಗಾಸಸ್‌ ಕುತಂತ್ರಾಂಶ ಖರೀದಿಗೆ ಆಫರ್‌ ಬಂದಿತ್ತು, ನಾವು ರಿಜೆಕ್ಟ್‌ ಮಾಡಿದ್ದೆವು: ಕೇಂದ್ರಕ್ಕೆ ಚಾಟಿ ಬೀಸಿದ ಬ್ಯಾನರ್ಜಿ

ಕೋಲ್ಕತ್ತಾ: ಪೆಗಾಸಸ್‌ ಸ್ಪೈವೇರ್‌ ಕುತಂತ್ರಾಂಶ ಖರೀದಿಸುವಂತೆ ಐದು ವರ್ಷಗಳ ಹಿಂದೆಯೇ ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್‌ನವರು ನಮ್ಮ ಬಳಿ ಬಂದಿದ್ದರು. ಆದರೆ ನಾವು ಅದನ್ನು ನಿರಾಕರಿಸಿದ್ದೆವು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೊಸ ಬಾಂಬ್‌ ಸಿಡಿಸಿದ್ದಾರೆ.

ಪೆಗಾಸಸ್‌ ಕುತಂತ್ರಾಂಶ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ, ಟೀಕೆಗಳು ವ್ಯಕ್ತವಾಗಿವೆ. ಇದರ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಅವರು ಅಚ್ಚರಿದಾಯಕ ಹೇಳಿಕೆಯೊಂದನ್ನು ನೀಡಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ಸಚಿವರನ್ನು ಜೈಲಿನಿಂದ ಬಿಡುಗಡೆ ಮಾಡಲು 3 ಕೋಟಿಗೆ ಬೇಡಿಕೆ- ಪುತ್ರನಿಂದ ದೂರು ದಾಖಲು

ಕಳೆದ ಐದು ವರ್ಷಗಳ ಹಿಂದೆಯೇ 25 ಕೋಟಿ ರೂ.ಗೆ ಪೆಗಾಸಸ್‌ ತಂತ್ರಾಂಶ ಖರೀದಿಸುವಂತೆ ಎನ್‌ಎಸ್‌ಒ ಗ್ರೂಪ್‌ ನಮ್ಮ ಪೊಲೀಸ್‌ ಇಲಾಖೆಗೆ ಆಫರ್‌ ನೀಡಿತ್ತು. ಆದರೆ ನಾವು ಅದನ್ನು ತಿರಸ್ಕರಿಸಿದೆವು. ಸ್ಪೈವೇರ್‌ ಅನ್ನು ರಾಜಕೀಯವಾಗಿ ಬಳಸಿಕೊಳ್ಳಬಹುದಿತ್ತು. ನ್ಯಾಯಾಧೀಶರು, ಪತ್ರಕರ್ತರು, ಅಧಿಕಾರಿಗಳನ್ನು ಇದಕ್ಕೆ ಗುರಿಯಾಗಿಸಬಹುದು ಎಂಬುದು ಸ್ವೀಕಾರಾರ್ಹವಲ್ಲ ಎಂದು ನಾವು ಈ ಆಫರ್‌ ತಿರಸ್ಕರಿಸಿದ್ದೆವು ಎಂದು ಪರೋಕ್ಷವಾಗಿ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

ಪತ್ರಕರ್ತರು, ರಾಜಕಾರಣಿಗಳು, ಉದ್ಯಮಿಗಳು ಮತ್ತು ಇತರರ ಫೋನ್‌ಗಳನ್ನು ಗುರಿಯಾಗಿಸಲು ಮಿಲಿಟರಿ ದರ್ಜೆಯ ಇಸ್ರೇಲಿ ಸ್ಪೈವೇರ್ ಅನ್ನು ಬಳಸುತ್ತಿದ್ದಾರೆ ಎಂದು ಕೇಂದ್ರದ ನರೇಂದ್ರ ಮೋದಿ ಸರ್ಕಾರವನ್ನು ಬ್ಯಾನರ್ಜಿ ಅವರು ಟೀಕಿಸಿದ್ದರು. ಇದನ್ನೂ ಓದಿ: ಯಾರೇ ಲಂಚ ಕೇಳಿದರೂ ಆಡಿಯೋ – ವೀಡಿಯೋ ನನಗೇ ಕಳುಹಿಸಿ: ಪಂಜಾಬ್ ಸಿಎಂ

ಕಳೆದ ವರ್ಷ ರಾಷ್ಟ್ರವನ್ನು ಬೆಚ್ಚಿಬೀಳಿಸಿದ ಪೆಗಾಸಸ್ ಸ್ಪೈವೇರ್‌ ವಿವಾದದ ಬಗ್ಗೆ ತನಿಖೆಗೆ ಬಂಗಾಳ ಸರ್ಕಾರ ಆದೇಶಿಸಿತ್ತು. ಹಾಗೆ ಮಾಡಿದ ಮೊದಲ ರಾಜ್ಯ ಪಶ್ಚಿಮ ಬಂಗಾಳ. ಆಯೋಗದ 3ನೇ ಪರಿಚ್ಛೇದ ನೀಡಿರುವ ಅಧಿಕಾರವನ್ನು ಚಲಾಯಿಸಿ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ, ನಿವೃತ್ತ ನ್ಯಾಯಮೂರ್ತಿ ಎಂ.ಬಿ.ಲೋಕೂರ್ ಮತ್ತು ಕೋಲ್ಕತ್ತಾ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ, ನಿವೃತ್ತ ನ್ಯಾಯಮೂರ್ತಿ ಜ್ಯೋತಿರ್ಮಯ್ ಭಟ್ಟಾಚಾರ್ಯ ಅವರನ್ನು ಒಳಗೊಂಡ ತನಿಖಾ ಆಯೋಗವನ್ನು ನೇಮಿಸಲು ಸಂಪುಟ ಅನುಮೋದನೆ ನೀಡಿದೆ. ಪಶ್ಚಿಮ ಬಂಗಾಳ ರಾಜ್ಯದ ಅನೇಕರ ಮೊಬೈಲ್ ಫೋನ್‌ಗಳ ಅಕ್ರಮ ಹ್ಯಾಕಿಂಗ್, ಮೇಲ್ವಿಚಾರಣೆ, ಕಣ್ಗಾವಲು, ಟ್ರ್ಯಾಕಿಂಗ್, ರೆಕಾರ್ಡಿಂಗ್ ಇತ್ಯಾದಿಗಳ ವಿಷಯದಲ್ಲಿ ವ್ಯಾಪಕವಾಗಿ ವರದಿಯಾಗಿದೆ ಎಂದು ಆಗ ಬ್ಯಾನರ್ಜಿ ಹೇಳಿದ್ದರು.

Comments

Leave a Reply

Your email address will not be published. Required fields are marked *