ಮತ್ತೊಮ್ಮೆ ಮೋದಿ ವಿಶೇಷ ಆಹ್ವಾನ ತಿರಸ್ಕರಿಸಿದ ಮಲ್ಲಿಕಾರ್ಜನ ಖರ್ಗೆ

ನವದೆಹಲಿ: ಲೋಕಸಭೆಯ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಪಾಲ ರಚನೆಯ ಚರ್ಚೆ ಕುರಿತ ಸಭೆಗೆ ಪ್ರಧಾನಿ ಮೋದಿ ಆಹ್ವಾನವನ್ನು ತಿರಸ್ಕರಿಸಿದ್ದು, ಸಭೆಗೆ ಗೈರು ಹಾಜರಾಗುವ ಕುರಿತು ಪತ್ರ ಬರೆದಿದ್ದಾರೆ.

ತಮ್ಮ ಗೈರು ಹಾಜರಿಗೆ ಕಾರಣವನ್ನು ತಿಳಿಸಿರುವ ಖರ್ಗೆ ಪೂರ್ಣ ಪ್ರಮಾಣದಲ್ಲಿ ಲೋಕಪಾಲ ಆಯ್ಕೆ ಸಮಿತಿ ನೇಮಕವಾಗುವರೆಗೂ, ಕಾಂಗ್ರೆಸ್ ವಿರೋಧಿ ಪಕ್ಷವಾಗಿ ಯಾವುದೇ ಚರ್ಚೆಯಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ತಮಗೆ ನೀಡಿದ ವಿಶೇಷ ಆಹ್ವಾನದ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಅವರು, ತಮಗೆ ವಿಶೇಷ ಆಹ್ವಾನಿತ ಎಂಬ ಮನ್ನಣೆ ಬೇಡ, ಅತಿ ದೊಡ್ಡ ವಿರೋಧಿ ಪಕ್ಷದ ನಾಯಕನಿಗೆ ಸಮಿತಿಯಲ್ಲಿ ಸ್ಥಾನ ನೀಡಬೇಕು. ವಿಶೇಷ ಆಹ್ವಾನದ ಮೇರೆಗೆ ಯಾವುದೇ ಅಧಿಕಾರವಿರುವುದಿಲ್ಲ. 2013 ರ ಲೋಕಪಾಲ ಕಾಯ್ದೆಯ ಸಮಿತಿ ರಚನೆಯಾಗಬೇಕು ಎಂದು ತಿಳಿಸಿದ್ದಾರೆ.

ಒಂದೊಮ್ಮೆ ಸರ್ಕಾರಕ್ಕೆ ಲೋಕಪಾಲ ರಚನೆ ಕುರಿತು ನಿಜವಾದ ಇಚ್ಛಾಶಕ್ತಿ ಹೊಂದಿದ್ದರೆ, ವಿರೋಧ ಪಕ್ಷದ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ಅಧಿಕಾರಿದಲ್ಲಿದ್ದು, ಲೋಕಪಾಲ ರಚನೆ ಮಾಡುವ ಯಾವುದೇ ಆಸಕ್ತಿಯನ್ನು ಬಿಜೆಪಿ ಹೊಂದಿಲ್ಲ ಎಂದು ಆರೋಪಿಸಿದರು.

ಪ್ರಧಾನಿ ಮೋದಿ ನೇತೃತ್ವದ ಸಭೆ ಗುರುವಾರ ನಿಗದಿಯಾಗಿತ್ತು. ಈ ಹಿಂದೆಯೂ ಇದೇ ಕಾರಣ ನೀಡಿ ಮಾರ್ಚ್ 1 ಹಾಗೂ ಏಪ್ರಿಲ್ 10 ರಂದು ನಿಗದಿಯಾಗಿದ್ದ ಸಭೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದರು.

Comments

Leave a Reply

Your email address will not be published. Required fields are marked *