ವಿಡಿಯೋ: ಕೆಟ್ಟು ಹೋದ ಎಟಿಎಂನಿಂದ ನೋಟುಗಳ ಸುರಿಮಳೆ- ಸಿಕ್ಕಿದ್ದು ಸೀರುಂಡೆ ಅಂತ ಬಾಚಿಕೊಂಡು ಹೋದ ಜೋಡಿ!

ಬೀಜಿಂಗ್: ಎಟಿಎಂಗಳು ಸರಿಯಾಗಿ ಕಾರ್ಯನಿರ್ವಹಿಸಿದೆ ಕಾರ್ಡ್ ಸಿಲುಕಿಕೊಳ್ಳುವುದು ಅಥವಾ ಹಣ ಬರದೇ ಇರೋ ಬಗ್ಗೆ ಕೇಳಿರ್ತೀರ. ಆದ್ರೆ ಇಲ್ಲೊಂದು ಎಟಿಎಂ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ನೋಟುಗಳ ಸುರಿಮಳೆಯಾಗಿದ್ದು, ಅದೇ ಸಮಯಕ್ಕೆ ಅಲ್ಲಿಗೆ ಬಂದ ಇಬ್ಬರು ಹಣವನ್ನ ಬಾಚಿಕೊಂಡಿದ್ದಾರೆ.

ಮಾರ್ಚ್ 6ರಂದು ಚೀನಾದ ಝೀಜಿಯಾಂಗ್ ಪ್ರಾಂತ್ಯದಲ್ಲಿ ಎಟಿಎಂ ನಲ್ಲಿ ತೊಂದರೆ ಕಾಣಿಸಿಕೊಂಡಿದ್ದು, ಎರಡೇ ಸೆಕೆಂಡ್‍ನಲ್ಲಿ 3 ಸಾವಿರ ಯುವಾನ್(ಅಂದಾಜು 30 ಸಾವಿರ ರೂ.) ಮೊತ್ತದ ನೋಟುಗಳನ್ನ ಹೊರಹಾಕಿದೆ. ಈ ದೃಶ್ಯ ಎಟಿಎಂ ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೆಲವೇ ಸೆಕೆಂಡ್‍ಗಳಲ್ಲಿ ಎಟಿಎಂ ನಿಂದ ಹಣ ಹೊರಬೀಳೋದನ್ನ ವಿಡಿಯೋದಲ್ಲಿ ಕಾಣಬಹುದು. ಆದ್ರೆ ಎಟಿಎಂ ದೋಷಕ್ಕೆ ಕಾರಣವೇನೆಂಬುದು ಸ್ಪಷ್ಟವಾಗಿಲ್ಲ.

ಈ ವೇಳೆ ಎಟಿಎಂ ನಲ್ಲಿ ಯಾವುದೇ ಗ್ರಾಹಕರು ಇರಲಿಲ್ಲ. ಎಟಿಎಂ ನಿಂದ ಹೊರಬಿದ್ದ ನೋಟುಗಳು ನೆಲದ ಮೇಲೆ ಬಿದ್ದಿದ್ದು, ಇದೇ ಸಮಯಕ್ಕೆ ಅಲ್ಲಿಗೆ ಬಂದ ಇಬ್ಬರು ಸಿಕ್ಕಿದ್ದು ಸೀರುಂಡೆ ಅಂತ ಹಣವನ್ನ ಬಾಚಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ.

ಒಬ್ಬ ಹಣವನ್ನ ಕೈಗೆತ್ತಿಕೊಂಡು ಎಣಿಸಿ ಜೇಬಲ್ಲಿ ಇಟ್ಟುಕೊಂಡಿದ್ದಾನೆ. ಆದ್ರೆ ಆತ ಸಿಸಿಟಿವಿ ಯನ್ನ ನೇರವಾಗಿ ನೋಡಿಲ್ಲ. ಆದರೂ ಪೊಲೀಸರು ಆ ಇಬ್ಬರನ್ನ ಪತ್ತೆಹಚ್ಚಿದ್ದು, ಹಣ ವಾಪಸ್ ನೀಡುವಂತೆ ಮನವೊಲಿಸಿದ್ದಾರೆಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಆ ಇಬ್ಬರೂ ಹಣವನ್ನ ತೆಗೆದುಕೊಂಡ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪರ ವಿರೋಧ ಚರ್ಚೆ ಎದ್ದಿದೆ. ಕೆಲವರು ಹಣ ತೆಗೆದುಕೊಂಡಿದ್ದು ತಪ್ಪು ಎಂದರೆ, ಇನ್ನೂ ಕೆಲವರು ಸಿಕ್ಕಿದ್ದನ್ನು ಇಟ್ಟುಕೊಂಡ್ರೆ ತಪ್ಪೇನು ಎಂದು ವಾದಿಸಿದ್ದಾರೆ.

Comments

Leave a Reply

Your email address will not be published. Required fields are marked *