ಸ್ವದೇಶಿ ಬುಲೆಟ್ ಪ್ರೂಫ್ ಜಾಕೆಟ್ ಅಭಿವೃದ್ಧಿ- ವಿಶೇಷತೆ ಏನು? ಬೆಲೆ ಎಷ್ಟು?

ನವದೆಹಲಿ: ಅಮೆರಿಕ, ಇಂಗ್ಲೆಂಡ್, ಮತ್ತು ಜರ್ಮನಿಯಂತೆ ಭಾರತವೂ ಈಗ ಬುಲೆಟ್ ಪ್ರೂಫ್(ಗುಂಡು ನಿರೋಧಕ) ಜಾಕೆಟ್ ಅಭಿವೃದ್ಧಿ ಪಡಿಸಿದೆ.

ಮೇಕ್ ಇನ್ ಇಂಡಿಯಾದ ಅಡಿಯಲ್ಲಿ ಈ ಜಾಕೆಟ್ ಅಭಿವೃದ್ಧಿ ಪಡಿಸಲಾಗಿದ್ದು ಸುರಕ್ಷಿತವಾಗಿರುವುದರ ಜೊತೆ ಅಂತಾರಾಷ್ಟ್ರೀಯ ಉತ್ಪಾದನೆಗೆ ಹೋಲಿಸಿದರೆ ಹಗುರ ಮತ್ತು ಬೆಲೆಯೂ ಕಡಿಮೆಯಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಖಾತೆಯ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬುಲೆಟ್ ಪ್ರೂಫ್ ಜಾಕೆಟ್ ಅಭಿವೃದ್ಧಿ ಪಡಿಸುತ್ತಿರುವ ಅಮೆರಿಕ, ಇಂಗ್ಲೆಂಡ್ ಮತ್ತು ಜರ್ಮನಿ ದೇಶಗಳ ಸಾಲಿಗೆ ಈಗ ಭಾರತವೂ ಸೇರಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬುಲೆಟ್ ಪ್ರೂಫ್ ಜಾಕೆಟ್ ಕೊಡ್ಲಿಲ್ಲ, ದೇಶಕ್ಕಿಂತ ಪರಿವಾರವೇ ಅವರಿಗೆ ಮುಖ್ಯವಾಗಿತ್ತು : ಕಾಂಗ್ರೆಸ್ ತಿವಿದ ಮೋದಿ

ಬ್ಯುರೋ ಆಫ್ ಇಂಡಿಯಾ ಸ್ಟಾಂಡರ್ಡ್(ಬಿಐಎಸ್) ಮಾನದಂಡಕ್ಕೆ ಅನುಗುಣವಾಗಿ ಈ ಬುಲೆಟ್‍ಪ್ರೂಫ್ ಜಾಕೆಟ್ ಅಭಿವೃದ್ಧಿ ಪಡಿಸಲಾಗಿದೆ. ನೀತಿ ಆಯೋಗ ಮತ್ತು ಗೃಹ ಸಚಿವಾಲಯದ ನಿರ್ದೇಶನದ ಹಿನ್ನೆಲೆಯಲ್ಲಿ ಮಾನದಂಡ ಸಿದ್ಧವಾಗಿದ್ದು ಈ ಮಾನದಂಡದಂತೆ ಈಗ ಜಾಕೆಟ್ ನಿರ್ಮಿಸಲಾಗಿದೆ. ಈ ಜಾಕೆಟ್ ಸಣ್ಣ ಪಿಸ್ತೂಲಿನಿಂದ ಹಿಡಿದು ಎಕೆ 47 ಬಂದೂಕಿನಿಂದ ಸಿಡಿದ ಗುಂಡನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆ.

ಬಹಳ ವರ್ಷಗಳಿಂದ ಭಾರತದ ಸೇನೆಗೆ ಬುಲೆಟ್ ಪ್ರೂಫ್ ಜಾಕೆಟ್ ನೀಡಬೇಕೆಂಬ ಬೇಡಿಕೆ ಬಂದಿತ್ತು. ಆದರೆ ಈ ಬೇಡಿಕೆ ಪೂರ್ಣಗೊಂಡಿರಲಿಲ್ಲ. ಇನ್ನು ಮುಂದೆ ಸೇನೆ, ಪ್ಯಾರಾಮಿಲಿಟರಿ ಫೋರ್ಸ್ ಮತ್ತು ರಾಜ್ಯ ಪೊಲೀಸ್ ಪಡೆಗೆ ಈ ಜಾಕೆಟ್ ನೀಡಲಾಗುತ್ತದೆ. ಇದನ್ನೂ ಓದಿ:ಸೈನಿಕರಿಗೆ ಬುಲೆಟ್ ಪ್ರೂಫ್ ಜಾಕೆಟ್ ನೀಡಲು ಆಗದವರು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮಾತನಾಡುತ್ತಾರೆ: ಮೋದಿ

ಬಿಐಎಸ್ ಮಾನದಂಡ ಅಂತಾರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿಯೇ ಈ ಜಾಕೆಟ್ ತಯಾರಿಸಲಾಗಿದೆ. ಧರಿಸಲು ಹಗುರ ಇದ್ದು ಅಪಾಯವನ್ನು ಗಮನದಲ್ಲಿಟ್ಟುಕೊಂಡು 5 ರಿಂದ 10 ಕೆಜಿ ತೂಕದ ಬುಲೆಟ್ ಪ್ರೂಫ್ ಜಾಕೆಟ್ ಅಭಿವೃದ್ಧಿ ಪಡಿಸಿದ್ದೇವೆ ಎಂದು ರಾಮ್ ವಿಲಾಸ್ ಪಾಸ್ವಾನ್  ತಿಳಿಸಿದರು.

ಬೆಲೆ ವಿಚಾರದ ಬಗ್ಗೆ ಮಾತನಾಡಿದ ಅವರು, ಒಂದು ಜಾಕೆಟಿಗೆ 70 ಸಾವಿರದಿಂದ ಆರಂಭಗೊಂಡು 80 ಸಾವಿ ರೂ. ಖರ್ಚಾಗುತ್ತದೆ. ಆರಂಭದಲ್ಲಿ ಅಂದಾಜು ಮಾಡಿದ್ದಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದಲ್ಲಿ ತಯಾರಿಸಲಾಗಿದೆ. ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಈ ಜಾಕೆಟ್ ತಯಾರಾಗಿದ್ದಕ್ಕೆ ಸಂತಸವಾಗುತ್ತಿದೆ. ಈಗಾಗಲೇ ಈ ಜಾಕೆಟ್ ಗಳನ್ನು ವಿದೇಶಕ್ಕೂ ರಫ್ತು ಮಾಡುವ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಮಾಹಿತಿ ನೀಡಿದರು.

ಈ ಜಾಕೆಟನ್ನು ಸೈನಿಕರು ಸುಲಭವಾಗಿ ಧರಿಸಬಹುದು ಮತ್ತು ತೆಗೆಯಬಹುದಾಗಿದ್ದು, ಬುಲೆಟ್ ಗಳಿಂದ 360 ಡಿಗ್ರಿ ಭದ್ರತೆಯನ್ನು ನೀಡುತ್ತದೆ.

Comments

Leave a Reply

Your email address will not be published. Required fields are marked *