ಮಹೇಶ್‌ ಶೆಟ್ಟಿ ತಿಮರೋಡಿ ಜೈಲಿಗೆ – 14 ದಿನ ನ್ಯಾಯಾಂಗ ಬಂಧನ

ಉಡುಪಿ: ಸಾಮಾಜಿಕ ಕಾರ್ಯಕರ್ತ ಮಹೇಶ್‌ ಶೆಟ್ಟಿ ತಿಮರೋಡಿಗೆ (Mahesh Shetty Thimarodi) ಕೋರ್ಟ್‌ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ (BL Santosh) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಇಂದು ಉಡುಪಿಯ ಬ್ರಹ್ಮಾವರ ಪೊಲೀಸರು ಉಜಿರೆಗೆ ತೆರಳಿ ನಿವಾಸದಿಂದ ತಿಮರೋಡಿಯನ್ನು ಬಂದಿಸಿದ್ದರು.

ಮಧ್ಯಾಹ್ನ ಮೆಡಿಕಲ್‌ ಪರೀಕ್ಷೆ ನಡೆಸಿ ಬ್ರಹ್ಮಾವರ ತಾಲೂಕು ಕೋರ್ಟ್‌ಗೆ ಹಾಜರು ಪಡಿಸಿದರು. ಈ ಸಂದರ್ಭದಲ್ಲಿ ತಿಮರೋಡಿ ಪರ ವಕೀಲರು ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆ ನಡೆಯಿತು. ಜಾಮೀನು ನೀಡಲು ನಿರಾಕರಿಸಿದ ಕೋರ್ಟ್‌ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ಮಹೇಶ್‌ ಶೆಟ್ಟಿಯ ಜಾಮೀನು ಅರ್ಜಿಯ ವಿಚಾರಣೆ ಅಗಸ್ಟ್ 23ಕ್ಕೆ ನಡೆಯಲಿದೆ.

ಕೋರ್ಟ್‌ ಆದೇಶದ ಹಿನ್ನೆಲೆ ಮಹೇಶ್ ತಿಮರೋಡಿ ಈಗ ಹಿರಿಯಡ್ಕ ಸಬ್ ಜೈಲು ಸೇರಿದ್ದಾರೆ.

ತಿಮರೋಡಿ ವಕೀಲ ವಿಜಯವಾಸು ಪೂಜಾರಿ ಪ್ರತಿಕ್ರಿಯಿಸಿ, ತಿಮರೋಡಿಯವರ ಹೇಳಿಕೆಯನ್ನ ಪೊಲೀಸರು ದಾಖಲು ಮಾಡಿದ್ದಾರೆ. ತಿಮರೋಡಿ ಅವರು ಬಿಪಿ ಸಮಸ್ಯೆಯಿಂದ ಬಳಲ್ತಿದ್ದಾರೆ. ಹೈ ಬಿಪಿಗೆ ವೈದ್ಯರು ಮಾತ್ರೆ ನೀಡಿದ್ದರು. ಹೈಕೋರ್ಟ್ ಸುಪ್ರೀಂ ಕೋರ್ಟ್ ಆದೇಶವನ್ನು ಕೋರ್ಟ್‌ನಲ್ಲಿ ಉಲ್ಲೇಖಿಸಲಾಯ್ತು. ಈ ಸೆಕ್ಷನ್‌ನಲ್ಲಿ ಏಳು ವರ್ಷದವರೆಗೆ ಮಾತ್ರ ಶಿಕ್ಷೆಯಿದೆ. ಜಾಮೀನು ರಹಿತಿ ಸೆಕ್ಷನ್‌ನಲ್ಲಿ ಕೇಸ್‌ ದಾಖಲಾಗಿರುವ ಕಾರಣ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್‌ ಹೇಳಿದೆ ಎಂದು ತಿಳಿಸಿದರು.

ಸೋಮವಾರ ಇನ್ನೊಂದು ಬಾರಿ ವಿಚಾರಣೆ ನಡೆಯಲಿದೆ. ಬಿ ಎಲ್ ಸಂತೋಷ್ ಅವರು ಎಲ್ಲಿಯೂ ಪ್ರಕರಣವನ್ನು ದಾಖಲು ಮಾಡಿಲ್ಲ. ಆ.16 ರಂದು ವಿಡಿಯೋ ವೈರಲ್‌ ಆಗಿದ್ದರೂ ಇಲ್ಲಿಯವರೆಗೆ ಈವರೆಗೂ ಎಲ್ಲೂ ಅಹಿತಕರ ಘಟನೆ ನಡೆದಿಲ್ಲ. ಶಾಂತಿ ಕದಡುವ ಯಾವುದೇ ಘಟನೆ ನಡೆದಿಲ್ಲ ಎಂದು ಹೇಳಿದರು.

ದೂರಿನಲ್ಲಿ ಎರಡು ಜಾಮೀನು ರಹಿತ ಸೆಕ್ಷನ್ ಹಾಕಲಾಗಿದೆ. ಎರಡು ಸೆಕ್ಷನ್ ನಲ್ಲಿ ಮೂರು ವರ್ಷ ಶಿಕ್ಷೆ ಮತ್ತು ದಂಡ ಇರುತ್ತದೆ. ಸೋಮವಾರ ನೂರಕ್ಕೆ ನೂರು ತಿಮರೋಡಿಗೆ ಜಾಮೀನು ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.