ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಸೂತ್ರ ತಯಾರಿಸಿದ ಬಿಜೆಪಿ

ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಕಸರತ್ತು ತೀವ್ರಗೊಂಡಿದೆ. ಮುಂದಿನ 5 ವರ್ಷ ನಾನೇ ಸಿಎಂ. ಯಾವುದೇ ಫಾರ್ಮುಲಾ ಇಲ್ಲ ಅಂದಿದ್ದ ದೇವೇಂದ್ರ ಫಡ್ನವೀಸ್ ಈಗ ಸ್ವಲ್ಪ ಮೃದುವಾಗಿದ್ದಾರೆ.

ಬಿಜೆಪಿಗೆ ಮುಖ್ಯಮಂತ್ರಿ ಖಾತೆ, 26 ಖಾತೆ ಮತ್ತು ಶಿವಸೇನೆಗೆ ಡಿಸಿಎಂ ಮತ್ತು 13 ಸಚಿವ ಸ್ಥಾನ ನೀಡಲು ಬಿಜೆಪಿ ಸೂತ್ರ ಸಿದ್ಧಗೊಳಿಸಿದೆ. ಆದರೆ, ಇದನ್ನು ಶಿವಸೇನೆ ಒಪ್ಪುತ್ತದೆಯೇ ಎನ್ನುವುದು ಪ್ರಶ್ನೆಯಾಗಿದೆ.

ಈ ಮಧ್ಯೆ, ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ದೇವೇಂದ್ರ ಫಡ್ನವೀಸ್ ಆಯ್ಕೆಯಾಗಿದ್ದು, 105 ಶಾಸಕರು ಹಾಜರಿದ್ದರು. ಬಳಿಕ ಮಾತನಾಡಿದ ಫಡ್ನವೀಸ್, ಶೀಘ್ರವೇ ಶಿವಸೇನೆ ಜೊತೆ ಸರ್ಕಾರ ರಚನೆಯಾಗಲಿದೆ. ಬಿಜೆಪಿ ಮತ್ತು ಶಿವಸೇನೆ ಮೈತ್ರಿಯನ್ನು ಜನ ಒಪ್ಪಿಕೊಂಡು ನಮಗೆ ಬಹುಮತ ನೀಡಿದ್ದಾರೆ. ಇದರಲ್ಲಿ ಯಾವುದೇ ಸಂದೇಹವಿಲ್ಲ. ಚುನಾವಣಾ ಗೆಲುವಿಗೆ ಶಿವಸೇನೆಯ ಉದ್ಧವ್ ಠಾಕ್ರೆಯವರು ಮುಖ್ಯಪಾತ್ರ ವಹಿಸಿದ್ದಾರೆ ಎಂದು ಹೇಳಿ ಧನ್ಯವಾದ ಹೇಳಿದರು.

ಗುರುವಾರ ಶಿವಸೇನೆ ಶಾಸಕಾಂಗ ಸಭೆ ನಡೆಸಲಿದೆ. ಶುಕ್ರವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮುಂಬೈಗೆ ಆಗಮಿಸಲಿದ್ದು, ಖಾತೆ ಹಂಚಿಕೆ ಕಗ್ಗಟ್ಟನ್ನು ಸರಳವಾಗಿಯೇ ಬಗೆಹರಿಸಲಿದ್ದಾರೆ ಎನ್ನಲಾಗುತ್ತಿದೆ.

ಒಟ್ಟು 288 ಕ್ಷೇತ್ರಗಳ ಪೈಕಿ ಬಿಜೆಪಿ 105ರಲ್ಲಿ ಜಯಗಳಿಸಿದರೆ ಶಿವಸೇನೆ 56 ಕ್ಷೇತ್ರಗಳಲ್ಲಿ ಜಯಗಳಿಸಿದೆ. ಶಿವಸೇನೆ 50:50 ಅಧಿಕಾರ ಸೂತ್ರವನ್ನು ಮುಂದಿಟ್ಟರೆ ದೇವೇಂದ್ರ ಫಡ್ನಾವಿಸ್ 5 ವರ್ಷದವರೆಗೆ ನಾನೇ ಮುಖ್ಯಮಂತ್ರಿ ಎಂದು ಗುರುವಾರ ಹೇಳಿಕೆ ನೀಡಿದ್ದರು.

ಶಿವಸೇನೆಯ ವಕ್ತಾರ ಸಂಜಯ್ ರಾವತ್ ಪ್ರತಿಕ್ರಿಯಿಸಿ, 145ಕ್ಕಿಂತ ಹೆಚ್ಚಿನ ಸ್ಥಾನ ಪಡೆದ ಪಕ್ಷದ ಯಾವೊಬ್ಬ ಬೇಕಾದರೂ ಸಿಎಂ ಆಗಬಹುದು. ಆದರೆ ಅವರು ಸದನದಲ್ಲಿ ಬಹುಮತ ಸಾಬೀತು ಪಡಿಸಬೇಕು ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *