ಮಹಾತ್ಮ ಗಾಂಧಿ ಧರ್ಮಪತ್ನಿ ಕೂಡ ತಲೆಗೆ ಸೆರಗು ಹಾಕುತ್ತಿದ್ದರು: ಹಿಜಬ್‌ ಬೆಂಬಲಿಸಿದ ಹೆಚ್‌ಡಿಕೆ

ಬೆಂಗಳೂರು: ಮಹಾತ್ಮ ಗಾಂಧೀಜಿ ಅವರ ಧರ್ಮಪತ್ನಿ ಕಸ್ತೂರ ಬಾ ಅವರು ಕೂಡ ತಲೆಗೆ ಸೆರಗು ಹಾಕುತ್ತಿದ್ದರು ಎಂದು ಹಿಜಬ್‌ಗೆ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದ ಎದುರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಫೋಟೋದಲ್ಲೆಲ್ಲ ನೋಡಿದ್ದೇವೆ. ಕಸ್ತೂರ ಬಾ ಅವರು ಕೂಡ ತಲೆಗೆ ಸೆರಗು ಹಾಕುತ್ತಿದ್ದರು. ಎಷ್ಟೋ ಬಾರಿ ಬಿಸಿಲಿನ ತಾಪಕ್ಕೆ ಹಿಂದೂ, ಮುಸ್ಲಿಂ ಹೆಣ್ಣುಮಕ್ಕಳು ಶಾಲೆಗೆ ಹೋಗುವಾಗ ಸಮವಸ್ತ್ರದೊಂದಿಗೆ ತಲೆಗೆ ದುಪ್ಪಟ್ಟ ಥರ ಹಾಕುತ್ತಿದ್ದರು. ಅದಕ್ಕೆ ಸಂಬಂಧಿಸಿದ ಫೋಟೋಗಳು ಕೂಡ ನಮ್ಮ ಬಳಿ ಇವೆ. ಎಲ್ಲಾ ಸಮುದಾಯದ ಹೆಣ್ಣುಮಕ್ಕಳು ಯಾವುದೇ ವಿವಾದವಿಲ್ಲದೇ ಕೈಕೈ ಹಿಡಿದು ಶಾಲೆಗೆ ಹೋಗುತ್ತಿರುವ ಫೋಟೋಗಳು ಕೂಡ ಇವೆ. ಅದನ್ನು ಈಗ ವಿವಾದ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಹಿಜಬ್ ತೀರ್ಪು: ವಿಧಾನ ಪರಿಷತ್‍ನಲ್ಲಿ ಬಿಜೆಪಿ-ಕಾಂಗ್ರೆಸ್ ಜಟಾಪಟಿ

ಹೆಣ್ಣು ಮಕ್ಕಳು ಸಮವಸ್ತ್ರದ ಜೊತೆಗೆ ಅನೇಕ ಸಂದರ್ಭಗಳಲ್ಲಿ ತಮಗೆ ಬೇಕಾದಂತೆ ದುಪ್ಪಟ್ಟ ಧರಿಸುತ್ತಾರೆ. ಅದನ್ನು ವಿವಾದ ಮಾಡುವುದನ್ನು ಬಿಟ್ಟು ಸರ್ಕಾರ ಸಮವಸ್ತ್ರಕ್ಕೆ ಪೂರಕವಾಗಿ ದುಪ್ಪಟ್ಟ ಹಾಕಿ ಬರುವುದಕ್ಕೆ ಅವಕಾಶ ಮಾಡಿಕೊಡಲಿ. ತಲೆ ಮೇಲೆ ಸೆರಗಿನ ರೀತಿ ವಸ್ತ್ರವನ್ನು ಹಾಕಿಕೊಂಡು ಬರುವುದಕ್ಕೆ ಅವಕಾಶ ಮಾಡಿಕೊಟ್ಟರೆ ಮುಗಿದೇ ಹೋಯಿತು. ಅದನ್ನು ವಿವಾದ ಮಾಡುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ.

ಈ ಎಲ್ಲಾ ವಿಚಾರವನ್ನು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡುತ್ತೇನೆ. ಸಿಎಂ, ಹೆಣ್ಣುಮಕ್ಕಳಿಗೆ ಸನ್ಮಾನ ಮಾಡುವಾಗಲೂ ತಲೆಗೆ ಬಟ್ಟೆ ಹಾಕಿಕೊಂಡಿದ್ದರು. ಕೆಲವರು ಸೊಂಟಕ್ಕೆ ದುಪ್ಪಟ್ಟು ಕಟ್ಟುತ್ತಾರೆ. ಆಟ ಆಡುವಾಗಲೂ ಬೇರೆ ವಿಧಾನದಲ್ಲಿ ದುಪ್ಪಟ್ಟ ಹಾಕುತ್ತಾರೆ. ಮಕ್ಕಳು ಆ ದುಪ್ಪಟ್ಟವನ್ನು ಯಾವ ರೀತಿಯ ಬೇಕಾದರೂ ಹಾಕಬಹುದು. ರಾಜಕೀಯಕ್ಕಾಗಿ ಅದನ್ನು ಬಳಸಿಕೊಳ್ಳಬಾರದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಿಜಬ್ ತೀರ್ಪಿನ ವಿರುದ್ಧ ಬಂದ್ ಕರೆ ಕೊಟ್ಟವರು ಕಿಡಿಗೇಡಿಗಳು: ಆರ್.ಅಶೋಕ್

Comments

Leave a Reply

Your email address will not be published. Required fields are marked *