ಕಾಂಗ್ರೆಸ್ ಷರತ್ತು ಒಪ್ಪಿದ ಶಿವಸೇನೆ – ಮಹಾಮೈತ್ರಿ ಅಧಿಕಾರಕ್ಕೆ, ಉದ್ಧವ್ ಠಾಕ್ರೆ ಸಿಎಂ?

ಮುಂಬೈ: ರಾಜಕಾರಣದಲ್ಲಿ ಶತ್ರುಗಳು ಮಿತ್ರರಾಗುತ್ತಾರೆ. ಮಿತ್ರರು ಶತ್ರುಗಳಾಗುತ್ತಾರೆ ಎನ್ನುವುದು ಮತ್ತೊಮ್ಮೆ ದೃಢಪಟ್ಟಿದೆ. ಮಹಾರಾಷ್ಟ್ರದಲ್ಲಿ 25 ವರ್ಷಗಳ ಕಾಲ ಮಿತ್ರಪಕ್ಷವಾಗಿದ್ದ ಬಿಜೆಪಿಗೆ ಶಿವಸೇನೆ ಗುಡ್‍ಬೈ ಹೇಳಿದ್ದು ಕಾಂಗ್ರೆಸ್, ಎನ್‍ಸಿಪಿ, ಶಿವಸೇನೆ ನೇತೃತ್ವದ ಮಹಾಮೈತ್ರಿ ಅಧಿಕಾರಕ್ಕೆ ಬರಲಿದ್ದು ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗುವ ಸಾಧ್ಯತೆಯಿದೆ.

ಮುಖ್ಯಮಂತ್ರಿ ಸ್ಥಾನಕ್ಕೆ ಶಿವಸೇನೆ ಹಿಡಿದಿರುವ ಪಟ್ಟು ಸಡಿಲಸದ ಪರಿಣಾಮ ಬಿಜೆಪಿ ಭಾನುವಾರ ಸಂಜೆ ನಾವು ಸರ್ಕಾರ ರಚಿಸುವುದಿಲ್ಲ ಎಂದು ಹೇಳಿತ್ತು. ಬಿಜೆಪಿಯಿಂದ ಅಧಿಕೃತ ಘೋಷಣೆ ಹೊರ ಬಿದ್ದ ಬೆನ್ನಲ್ಲೇ ಶಿವಸೇನೆಗೆ ಬೆಂಬಲ ನೀಡಲು ಕಾಂಗ್ರೆಸ್ ಮತ್ತು ಎನ್‍ಸಿಪಿ ಮುಂದಾಗಿದೆ.

ಇಂದು ಬೆಳಗ್ಗೆ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಶಿವಸೇನೆಗೆ ಬೆಂಬಲ ನೀಡುವ ಬಗ್ಗೆ ಮಾತುಕತೆ ನಡೆದಿದೆ. ಇಂದು ಸಂಜೆ 4 ಗಂಟೆಗೆ ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್ ನಾಯಕರ ಜೊತೆ ಮಾತನಾಡಿ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಆರಂಭದಲ್ಲಿ ಮೈತ್ರಿಗೆ ಹಿಂದೇಟು ಹಾಕಿದ್ದ ಕಾಂಗ್ರೆಸ್, ಎನ್‍ಸಿಪಿ ಪಕ್ಷಗಳು ಶಿವಸೇನೆಗೆ ಷರತ್ತು ವಿಧಿಸಿತ್ತು. ಎನ್‍ಡಿಎ ಒಕ್ಕೂಟದಿಂದ ಹೊರ ಬಂದರೆ ಮಾತ್ರ ಮೈತ್ರಿಗೆ ಬೆಂಬಲ ನೀಡುವುದಾಗಿ ಹೇಳಿತ್ತು. ಸಿಎಂ ಸ್ಥಾನದ ಮೇಲೆ ಕಣ್ಣನ್ನು ಇಟ್ಟಿರುವ ಶಿವಸೇನೆ ಈ ಷರತ್ತನ್ನು ಒಪ್ಪಿಕೊಂಡಿದ್ದು ಈಗಾಗಲೇ ಮೋದಿ ಸರ್ಕಾರದಲ್ಲಿ ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಖಾತೆಯ ಸಚಿವ ಅರವಿಂದ ಸಾವಂತ್ ರಾಜೀನಾಮೆ ನೀಡಿದ್ದಾರೆ.

ಈಗಾಗಲೇ ಶಿವಸೇನೆಗೆ ರಾಜ್ಯಪಾಲರು ಸರ್ಕಾರ ರಚಿಸಲು ಅನುಮತಿ ನೀಡಿದ್ದು, ಬಹುಮತ ಸಾಬೀತು ಪಡಿಸಲು ಸೂಚಿಸಿದ್ದಾರೆ. ಮೂಲಗಳ ಪ್ರಕಾರ ಮಹಾಮೈತ್ರಿಯಲ್ಲಿ ಮೂರು ಪಕ್ಷಗಳ ಪೈಕಿ ಶಿವಸೇನೆ ಅತಿ ದೊಡ್ಡ ಪಕ್ಷವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನ, ಎನ್‍ಸಿಪಿ ಮತ್ತು ಕಾಂಗ್ರೆಸ್ಸಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲು ಮಾತುಕತೆ ನಡೆದಿದೆ. ಅಧಿಕಾರ ಹಂಚಿಕೆ ಸಂಬಂಧ ಮಾತುಕತೆ ಪೂರ್ಣಗೊಂಡರೆ ಶೀಘ್ರವೇ ಶಿವಸೇನೆ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಲಿದೆ.

ಮಹಾರಾಷ್ಟ್ರದಲ್ಲಿ ಶಿವಸೇನೆ ಇಲ್ಲಿಯವರೆಗೆ ಕಾಂಗ್ರೆಸ್ ವಿರುದ್ಧವೇ ಹೇಳಿಕೆ ನೀಡುತಿತ್ತು. ಹೀಗಾಗಿ ಕಾಂಗ್ರೆಸ್ ಮೈತ್ರಿಗೆ ಒಪ್ಪಿಗೆ ನೀಡಿದ್ದು ಕೈ ನಾಯಕರೇ ವಿರೋಧಿಸಿದ್ದಾರೆ. ಕಾಂಗ್ರೆಸ್ ಬಂಡಾಯ ನಾಯಕ ಸಂಜಯ್ ನಿರುಪಮ್ ಟ್ವೀಟ್ ಮಾಡಿ ಮೈತ್ರಿಯಿಂದ ಕಾಂಗ್ರೆಸ್ಸಿಗೆ ಹಾನಿಯಾಗುತ್ತದೆ. ಮಹಾರಾಷ್ಟ್ರದಲ್ಲಿ ರಾಜಕೀಯ ಅಸ್ಥಿರತೆ ಮುಂದುವರಿಯಲಿದೆ. 2020ಕ್ಕೆ ಮತ್ತೆ ಚುನಾವಣೆ ಎದುರಾಗುವ ಸಾಧ್ಯತೆಯಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಶಿವಸೇನೆಯ ಜೊತೆ ಮೈತ್ರಿ ಮಾಡುತ್ತಾ ಎಂದು ಪ್ರಶ್ನಿಸಿದ್ದಾರೆ.

ಮಹಾರಾಷ್ಟ್ರದ ಒಟ್ಟು 288 ಕ್ಷೇತ್ರಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಶಿವಸೇನೆ ಮೈತ್ರಿ ಮಾಡಿಕೊಂಡಿದ್ದರೆ ಕಾಂಗ್ರೆಸ್ ಮತ್ತು ಎನ್‍ಸಿಪಿ ಮೈತ್ರಿ ಮಾಡಿಕೊಂಡಿತ್ತು. ಚುನಾವಣೆಯಲ್ಲಿ ಬಿಜೆಪಿ 105, ಶಿವಸೇನೆ 56, ಎನ್‍ಸಿಪಿ 54, ಕಾಂಗ್ರೆಸ್ 44 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಫಲಿತಾಂಶ ಪ್ರಕಟಗೊಂಡ ದಿನವೇ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣನ್ನು ಇಟ್ಟಿರುವ ಶಿವಸೇನೆ ನಮ್ಮ ಬೇಡಿಕೆಯನ್ನು ಇರಿಸಿದರೆ ಮಾತ್ರ ಬಿಜೆಪಿಗೆ ಬೆಂಬಲ ನೀಡುವುದಾಗಿ ಹೇಳಿತ್ತು.

ಶಿವಸೇನೆ ಬ್ಲ್ಯಾಕ್‍ಮೇಲ್ ತಂತ್ರಕ್ಕೆ ಬಿಜೆಪಿ ಮಣಿದಿರಲಿಲ್ಲ. ಅಧ್ಯಕ್ಷ ಉದ್ಧವ್ ಠಾಕ್ರೆ  ತಂದೆಯವರಾದ ಬಾಳಾ ಠಾಕ್ರೆಯವರಿಗೆ ಶಿವಸೇನೆ ನಾಯಕರು ಮುಖ್ಯಮಂತ್ರಿ ಆಗಬೇಕೆಂದು ಕನಸು ಕಂಡಿದ್ದರು. ಈ ಕನಸು ನನಸು ಮಾಡಲು ಈ ಬೇಡಿಕೆಯನ್ನು ಇಟ್ಟಿದ್ದೇವೆ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದರು. ಅಷ್ಟೇ ಅಲ್ಲದೇ ಫಲಿತಾಂಶ ಬಂದ ದಿನವೇ ಸರ್ಕಾರ  ರಚನೆಯ ಎಲ್ಲ ಬಾಗಿಲು ತೆರೆದಿದೆ ಎಂದು ಶಿವಸೇನೆಯ ರಾಜ್ಯ ಸಭಾ ಸದಸ್ಯ ಸಂಜಯ್ ರಾವತ್ ಹೇಳಿದ್ದರು.

Comments

Leave a Reply

Your email address will not be published. Required fields are marked *