ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು – ಕೇಂದ್ರದ ಅಂಗಳದಲ್ಲಿ ಚೆಂಡು

ಮುಂಬೈ: ಮಹಾರಾಷ್ಟ್ರದಲ್ಲಿ ರಾಜ್ಯಪಾಲರು ಈಗ ತಮ್ಮ ದಾಳವನ್ನು ಉರುಳಿಸಿದ್ದು ರಾಷ್ಟ್ರಪತಿ ಆಡಳಿತ ಜಾರಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿ ಕ್ಷಣಕ್ಷಣಕ್ಕೂ ರಾಜಕೀಯ ಹೈಡ್ರಾಮಾ ನಡೆಯುತ್ತಿದ್ದು, ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಸೋಮವಾರ ರಾತ್ರಿ ಎನ್‍ಸಿಪಿಗೆ ಸರ್ಕಾರ ರಚಿಸುವಂತೆ ಆಹ್ವಾನ ನೀಡಿದ್ದರು.

ಎನ್‍ಸಿಪಿ ಈ ಆಹ್ವಾನವನ್ನು ಸ್ವೀಕರಿಸಿದ್ದರು ಇದೂವರೆಗೂ ಸರ್ಕಾರ ರಚನೆ ಸಂಬಂಧ ಹಕ್ಕು ಮಂಡನೆ ಮಾಡದ ಪರಿಣಾಮ ರಾಜ್ಯಪಾಲರು ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದ್ದಾರೆ. ಕೇಂದ್ರ ಕ್ಯಾಬಿನೆಟ್ ರಾಜ್ಯಪಾಲರ ವರದಿಯನ್ನು ಪರಿಶೀಲಿಸಿ ಈ ಸಂಬಂಧ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

ಶಿವಸೇನೆ ಜೊತೆ ಸರ್ಕಾರ ರಚಿಸುವ ಸಂಬಂಧ ಕಾಂಗ್ರೆಸ್ ಮತ್ತು ಎನ್‍ಸಿಪಿ ನಿರ್ಧಾರ ಅಂತಿಮವಾಗಿಲ್ಲ. ಎನ್‍ಸಿಪಿ ಮೈತ್ರಿಗೆ ಸಿದ್ಧ ಎಂದಿದ್ದರೂ ಕಾಂಗ್ರೆಸ್ ಒಪ್ಪಿಗೆ ನೀಡದ ಪರಿಣಾಮ ಸರ್ಕಾರ ರಚನೆಯ ಬಗ್ಗೆ ಅನುಮಾನ ಎದ್ದಿತ್ತು.

ಇಂದು ಮಹಾ ಕಾಂಗ್ರೆಸ್ ನಾಯಕರ ಜೊತೆ ದೆಹಲಿಯ ನಾಯಕರು ಸಭೆ ನಡೆಸುತ್ತಿದ್ದು ಇನ್ನೂ ಅಧಿಕೃತವಾಗಿ ಮೈತ್ರಿಗೆ ಒಪ್ಪಿಗೆ ಪ್ರಕಟಿಸಿಲ್ಲ. ಹೀಗಾಗಿ ವಿಧಾನಸಭಾ ಅವಧಿ ಮುಕ್ತಾಯಗೊಂಡಿದ್ದರೂ ಯಾವುದೇ ಸ್ಥಿರ ಸರ್ಕಾರ ರಚನೆಯಾಗದ ಪರಿಣಾಮ ರಾಜ್ಯಪಾಲರು ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದ್ದಾರೆ.

ಸರ್ಕಾರ ರಚನೆ ಸಂಬಂಧ ರಾಜ್ಯಪಾಲರು ಇಂದು ರಾತ್ರಿ 8:30ರ ಒಳಗಡೆ ನಿರ್ಧಾರ ಪ್ರಕಟಿಸಬೇಕು ಎಂದು ಎನ್‍ಸಿಪಿಗೆ ಸೂಚಿಸಿದ್ದರು. ಆದರೆ ನಿಗದಿತ ಸಮಯದ ಮುಗಿಯುವುದರ ಒಳಗಡೆ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದ್ದಕ್ಕೆ ಶಿವಸೇನೆ ನಾಯಕಿ ಪ್ರಿಯಾಂಕ ಚತುರ್ವೇದಿ ಕಿಡಿ ಕಾರಿದ್ದಾರೆ.

ಸೋಮವಾರ ಮಾತನಾಡಿದ್ದ ಎನ್‍ಸಿಪಿ ನಾಯಕ ಜಯಂತ್ ಪಾಟೀಲ್, ಮಂಗಳವಾರ ರಾತ್ರಿ 8.30ರ ವರೆಗೂ ಸರ್ಕಾರ ರಚನೆ ಮಾಡಲು ಕಾಲಾವಕಾಶ ನೀಡಿದ್ದಾರೆ. ಕಾಂಗ್ರೆಸ್ ನಾಯಕರೊಂದಿಗೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದ್ದರು.

ಇತ್ತ ಪತ್ರಿಕಾ ಪ್ರಕಟಣೆ ನೀಡಿರುವ ಕಾಂಗ್ರೆಸ್, ಯಾವುದೇ ಅಧಿಕೃತ ತೀರ್ಮಾನ ಕೈಗೊಂಡಿಲ್ಲ. ನಾಳೆ ಎನ್‍ಸಿಪಿ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿತ್ತು. ಶಿವಸೇನೆಗೆ ರಾಜ್ಯಪಾಲರು ಕೊಟ್ಟಿದ್ದ ಗಡುವು ಅಂತ್ಯವಾದ ಹಿನ್ನೆಲೆಯಲ್ಲಿ 2 ದಿನ ಹೆಚ್ಚುವರಿ ಸಮಯವನ್ನು ರಾಜ್ಯಪಾಲರು ನಿರಾಕರಿಸಿದ್ದರು.

Comments

Leave a Reply

Your email address will not be published. Required fields are marked *