ಯಾರಾಗ್ತಾರೆ ಮಹಾರಾಷ್ಟ್ರ ಸಿಎಂ – ರಾತ್ರೋರಾತ್ರಿ ತಲೆ ಎತ್ತಿದೆ ಅಜಿತ್ ಪವಾರ್ ಪೋಸ್ಟರ್

– ಎಲ್ಲ ಬಣಗಳಲ್ಲೂ ಮುಂದಿನ ಸಿಎಂ ಬಗ್ಗೆಯೇ ಚರ್ಚೆ

ಮುಂಬೈ: ಮಹಾರಾಷ್ಟ್ರ (Maharashtra) ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಕ್ಕೆ ಕ್ಷಣಗಣನೆ ಶುರುವಾಗಿದೆ. ‘ಮಹಾ’ ಅಧಿಕಾರದ ಚುಕ್ಕಾಣಿ ಯಾರಿಗೆ ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ. ಈ ಹೊತ್ತಿನಲ್ಲೇ, ಎನ್‌ಸಿಪಿ ಮುಖ್ಯಸ್ಥ ಅಜಿತ್‌ ಪವಾರ್‌ ಮುಂದಿನ ಸಿಎಂ ಎಂದು ಬಿಂಬಿಸುವ ಪೋಸ್ಟರ್‌ಗಳು ರಾರಾಜಿಸುತ್ತಿವೆ.

ನ.23 ರಂದು ನಡೆಯಲಿರುವ ಮಹಾರಾಷ್ಟ್ರ ಚುನಾವಣೆಯ ಮತ ಎಣಿಕೆಗೆ ಮುನ್ನ, ಪುಣೆಯಲ್ಲಿ ಎನ್‌ಸಿಪಿ ಮುಖ್ಯಸ್ಥ ಮತ್ತು ಉಪ ಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಅವರನ್ನು ಮುಖ್ಯಮಂತ್ರಿ ಎಂದು ಬಿಂಬಿಸುವ ಪೋಸ್ಟರ್‌ಗಳು ರಾತ್ರೋರಾತ್ರಿ ತಲೆ ಎತ್ತಿವೆ. ಈ ಪೋಸ್ಟರ್ ಅನ್ನು ಪಕ್ಷದ ಮುಖಂಡ ಸಂತೋಷ್ ನಂಗರೆ ಹಾಕಿದ್ದಾರೆ. ಇದನ್ನೂ ಓದಿ: ಅಘಾಡಿಗೆ ಆಪರೇಷನ್‌ ಭೀತಿ – ಮತ್ತೆ ರೆಸಾರ್ಟ್‌ ಪಾಲಿಟಿಕ್ಸ್‌ , ಕರ್ನಾಟಕಕ್ಕೆ ಶಾಸಕರು?

ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತು ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ನಡುವೆ ಪೈಪೋಟಿ ಇರಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು.

ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಯಲ್ಲಿ ಬಿಜೆಪಿ, ಶಿವಸೇನೆ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಅಜಿತ್ ಪವಾರ್ ಬಣ) ಸೇರಿವೆ. ವಿರೋಧ ಪಕ್ಷದ ಎಂವಿಎ ಮೈತ್ರಿಕೂಟದಲ್ಲಿ ಕಾಂಗ್ರೆಸ್, ಶಿವಸೇನೆ (ಉದ್ಧವ್‌ ಬಣ) ಮತ್ತು ಎನ್‌ಸಿಪಿ (ಶರದ್ ಪವಾರ್ ಬಣ) ಒಳಗೊಂಡಿದೆ. ಇದನ್ನೂ ಓದಿ: axis MY INDIA Exit Poll: ಮಹಾರಾಷ್ಟ್ರದಲ್ಲಿ ಮಹಾಯುತಿಗೆ ಅಧಿಕಾರ

ಆಡಳಿತಾರೂಢ ಮಹಾಯುತಿಯು ಮಹಾರಾಷ್ಟ್ರದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಸಜ್ಜಾಗಿದೆ. ಜಾರ್ಖಂಡ್‌ನಲ್ಲಿ ಎನ್‌ಡಿಎ ಕೂಡ ಸರ್ಕಾರ ರಚಿಸುವ ಹೊಸ್ತಿಲಲ್ಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ.