ರಾಮ ಮಂದಿರಕ್ಕೆ 1 ಕೋಟಿ ನೀಡಿ ಬಿಜೆಪಿಗೆ ಟಾಂಗ್ ಕೊಟ್ಟ ಠಾಕ್ರೆ

– ಬಿಜೆಪಿಯಿಂದ ಬೇರ್ಪಟ್ಟಿದ್ದೇನೆ, ಹಿಂದುತ್ವದಿಂದಲ್ಲ
– ಬಿಜೆಪಿ ಅಂದ್ರೆ ಹಿಂದುತ್ವ ಅಲ್ಲ

ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಒಂದು ಕೋಟಿ ರೂ. ನೀಡುವ ಭರವಸೆಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೀಡಿದ್ದಾರೆ. ಇದೇ ವೇಳೆ ಅವರು ಬಿಜೆಪಿ ವಿರುದ್ಧ ವಾಗ್ದಾಳಿವೂ ನಡೆಸಿದರು.

ಉದ್ಧವ್ ಠಾಕ್ರೆ ನವೆಂಬರ್ 28ರಂದು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಎನ್‍ಸಿಪಿ ಜೊತೆಗೆ ಮೈತ್ರಿ ಸರ್ಕಾರ ರಚಿಸಿದರು. ಮುಖ್ಯಮಮಂತ್ರಿಯಾದ ಬಳಿಕ ಮೊದಲ ಬಾರಿಗೆ ಅಯೋಧ್ಯೆಗೆ ಭೇಟಿ ನೀಡಿದ್ದಾರೆ. ಜೊತೆಗೆ ಮಹಾರಾಷ್ಟ್ರದ ಸಮ್ಮಿಶ್ರ ಸರ್ಕಾರ 100 ದಿನಗಳ ಪೂರೈಸಿದ ಹಿನ್ನೆಲೆಯಲ್ಲಿ ಉದ್ಧವ್ ಠಾಕ್ರೆ ಕುಟುಂಬದೊಂದಿಗೆ ಅಯೋಧ್ಯೆಗೆ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ.

ಈ ವೇಳೆ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ದೇವಾಲಯವು ಜಗತ್ತಿಗೆ ಕಾಣುವಷ್ಟು ಭವ್ಯವಾಗಿರಬೇಕು ಎಂದು ಸ್ಪಷ್ಟವಾಗಿ ಹೇಳಿದರು.

‘ನಾನು ಇಲ್ಲಿಗೆ ಶ್ರೀರಾಮನ ಆಶೀರ್ವಾದ ಪಡೆಯಲು ಬಂದಿದ್ದೇನೆ. ಇಲ್ಲಿ ಇಂದು ‘ಕೇಸರಿ ಕುಟುಂಬದ’ ಅನೇಕ ಸದಸ್ಯರು ಸೇರಿರುವುದು ಖುಷಿ ತಂದಿದೆ. ಕಳೆದ ಒಂದೂವರೆ ವರ್ಷದಲ್ಲಿ ಅಯೋಧ್ಯೆಗೆ ಮೂರನೇ ಬಾರಿ ಭೇಟಿ ಕೊಟ್ಟಿದ್ದೇನೆ. ರಾಮ ಮಂದಿರ ನಿರ್ಮಾಣಕ್ಕಾಗಿ ಒಂದು ಕೋಟಿ ರೂಪಾಯಿ ದೇಣಿಗೆ ನೀಡುವುದಾಗಿ ಘೋಷಿಸುತ್ತೇನೆ. ಈ ದೇಣಿಗೆಯು ರಾಜ್ಯ ಸರ್ಕಾರದಿಂದ ನೀಡುತ್ತಿಲ್ಲ. ಬಲದಲಾಗಿ ಟ್ರಸ್ಟ್ ನಿಂದ ನೀಡುತ್ತಿರುವೆ ಎಂದು ಹೇಳಿದರು.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಉದ್ಧವ್ ಠಾಕ್ರೆ, ‘ಬಿಜೆಪಿಯಿಂದ ಬೇರ್ಪಟ್ಟಿದ್ದೇನೆ ಹೊರತು ಹಿಂದುತ್ವದಿಂದಲ್ಲ. ಬಿಜೆಪಿ ಎಂದರೆ ಹಿಂದುತ್ವ ಅಲ್ಲ. ಹಿಂದುತ್ವ ಬೇರೆ, ಬಿಜೆಪಿ ಬೇರೆ ಎಂದು ಗುಡುಗಿದರು.

‘ನಾನು ಮತ್ತೆ ಮತ್ತೆ ಅಯೋಧ್ಯೆಗೆ ಬರುತ್ತೇನೆ. ಇದರೊಂದಿಗೆ ಮಹಾರಾಷ್ಟ್ರದಿಂದ ಬರುವ ಭಕ್ತರಿಗೆ ಇಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲು ಇಲ್ಲಿ ಭೂಮಿ ಒದಗಿಸುವಂತೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಮಾಡುತ್ತೇನೆ. ಮಹಾರಾಷ್ಟ್ರ ಭವನವನ್ನು ಇಲ್ಲಿ ನಿರ್ಮಿಸಲಾಗುವುದು. ಅದಕ್ಕೆ ಸಹಕಾರ ನೀಡಬೇಕು ಎಂದು ಕೇಳಿಕೊಂಡರು.

ವಿಶೇಷ ವಿಮಾನದಲ್ಲಿ ಕುಟುಂಬದೊಂದಿಗೆ ಲಕ್ನೋ ವಿಮಾನ ನಿಲ್ದಾಣಕ್ಕೆ ಬಂದ ಉದ್ಧವ್ ಠಾಕ್ರೆ ಅವರು ರಸ್ತೆ ಮಾರ್ಗವಾಗಿ ಅಯೋಧ್ಯೆಯನ್ನು ತಲುಪಿದರು. ಶ್ರೀರಾಮನ ದರ್ಶನ ಪಡೆದ ನಂತರ ಅಯೋಧ್ಯೆಯ ಸರಯು ಆರತಿಗೆ ಹಾಜರಾಗಲು ಹಾಗೂ ಸಾರ್ವಜನಿಕ ಸಭೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಕೊರೊನಾ ವೈರಸ್‍ನಿಂದಾಗಿ ಗೃಹ ವ್ಯವಹಾರ ಮತ್ತು ಆರೋಗ್ಯ ಸಚಿವಾಲಯದ ಸಲಹೆಯ ನಂತರ ಕಾರ್ಯಕ್ರಮವನ್ನು ರದ್ದುಪಡಿಸಲಾಯಿತು.

Comments

Leave a Reply

Your email address will not be published. Required fields are marked *