ಪರಸ್ಪರ ಡಿಕ್ಕಿ ಹೊಡೆದು ಬಾವಿಗೆ ಬಿದ್ದ ಸಾರಿಗೆ ಬಸ್, ಆಟೋ – 21 ಮಂದಿ ಸಾವು

– ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಘೋಷಣೆ

ಮುಂಬೈ: ಸಾರಿಗೆ ಬಸ್ ಹಾಗೂ ಆಟೋ ನಡುವೆ ಅಪಘಾತ ಸಂಭವಿಸಿ ರಸ್ತೆ ಬದಿಯ ಬಾವಿಗೆ ಬಿದ್ದ ಪರಿಣಾಮ 8 ಮಹಿಳೆಯರು ಸೇರಿ 21 ಮಂದಿ ದುರ್ಮರಣಕ್ಕೀಡಾದ ಘಟನೆ ಮಹಾರಾಷ್ಟ್ರದ ನಾಸಿಕ್‍ನಲ್ಲಿ ನಡೆದಿದೆ.

ನಾಸಿಕ್ ಸಮೀಪ ಮಂಗಳವಾರ ಸಂಜೆ ಈ ಅಪಘಾತ ನಡೆದಿದೆ. ಡಿಕ್ಕಿಯಾದ ಆಟೋ ಮತ್ತು ಬಸ್ ರಸ್ತೆ ಪಕ್ಕದಲ್ಲಿದ್ದ ಬಾವಿಗೆ ಉರುಳಿವೆ. ಮೊದಲು ಆಟೋ ಬಿದ್ದಿದ್ದು, ಬಳಿಕ ಬಸ್ ಅದರ ಮೇಲೆ ಉರುಳಿದೆ. ಅಪಘಾತಕ್ಕೀಡಾದ ಬಸ್ ಮಹಾರಾಷ್ಟ್ರ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ್ದು, ಬಸ್ ಟೈರ್ ಸ್ಫೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ ಆಟೋಗೆ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಎರಡೂ ವಾಹನಗಳು ರಸ್ತೆ ಬದಿಯಲ್ಲಿದ್ದ ಬಾವಿಗೆ ಬಿದ್ದಿವೆ.

ಘಟನೆಯಲ್ಲಿ 18 ಮಂದಿ ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು, ಅಗ್ನಿಶಾಮಕ ದಳ ಹಾಗೂ ಸ್ಥಳೀಯರಿಂದ ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ಮೃತಪಟ್ಟವರ ಕುಟುಂಬಸ್ಥರಿಗೆ ಮಹಾರಾಷ್ಟ್ರ ಸರ್ಕಾರ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಜೊತೆಗೆ ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಭರಿಸಲಾಗುತ್ತದೆ ಎಂದು ಭರವಸೆ ನೀಡಿದೆ.

ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ಈಗಾಗಲೇ 21 ಮೃತದೇಹಗಳನ್ನು ಬಾವಿಯಿಂದ ಹೊರತೆಗೆದಿದ್ದೇವೆ. ಅಲ್ಲದೆ ಪಂಪ್‍ಗಳನ್ನು ಬಳಸಿ ಬಾವಿಯ ನೀರನ್ನು ಹೊರಹಾಕುತ್ತಿದ್ದೇವೆ. ಯಾರಾದರು ಬಾವಿಯ ಕೆಸರಿನ ಅಡಿಯಲ್ಲಿ ಸಿಲುಕಿದ್ದಾರಾ ಎಂದು ಕಾರ್ಯಾಚರಣೆ ಮುಂದುವರಿಸಿದ್ದೇವೆ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *