ವಿರಾಜಮಾನನಿಗೆ ಮಹಾಮಸ್ತಕಾಭಿಷೇಕ- ಶ್ರವಣಬೆಳಗೊಳದಲ್ಲಿ ಐತಿಹಾಸಿಕ ಸಂಭ್ರಮ

ಹಾಸನ: ಶ್ರವಣಬೆಳಗೊಳದಲ್ಲಿ ಇಂದು ಐತಿಹಾಸಿಕ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಚಾಲನೆ ದೊರೆಯಲಿದ್ದು, ಭಕ್ತರು ಹಾಗೂ ಯಾತ್ರಾರ್ಥಿಗಳು ಬೆಳಗೊಳಕ್ಕೆ ಆಗಮಿಸಿದ್ದು, ಜನರಿಂದ ತುಂಬಿ ತುಳುಕುತ್ತಿದೆ.

ವಿಂಧ್ಯಗಿರಿಯ ಮೇಲೆ ವಿರಾಜಮಾನನಾಗಿರುವ 58.8 ಅಡಿ ಎತ್ತರದ ಬಾಹುಬಲಿಗೆ ಮಧ್ಯಾಹ್ನ 2ರಿಂದ ಸಂಜೆ 6 ಗಂಟೆವರೆಗೆ ಮಸ್ತಕಾಭಿಷೇಕ ನಡೆಯಲಿದೆ. ಮಧ್ಯಾಹ್ನ 2ರಿಂದ 3.30 ರವರೆಗೆ 108 ಕಲಶಾಭಿಷೇಕ, 3.30ರಿಂದ 5.30ರವರೆಗೆ ಪಂಚಾಮೃತ ಅಭಿಷೇಕ, 5.30ರಿಂದ ಸಂಜೆ 6 ಗಂಟೆವರೆಗೆ ಅಷ್ಟದ್ರವ್ಯ ಪೂಜೆ ಮತ್ತು ಮಹಾಮಂಗಳಾರತಿ ನಡೆಯಲಿದೆ.

ಸಿಎಂ ಸಿದ್ದರಾಮಯ್ಯ ಸೇರಿ ಹಲವು ಗಣ್ಯರು ಭಾಗಿಯಾಗಲಿದ್ದಾರೆ. ಆದ್ದರಿಂದ ಊಟ, ವಸತಿ, ಭದ್ರತೆ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅಪರೂಪದ ಮಸ್ತಕಾಭಿಷೇಕ ವೈಭವ ಕಣ್ತುಂಬಿಕೊಳ್ಳಲು ಈಗಾಗಲೇ ರಾಜ್ಯ, ದೇಶ ಹಾಗೂ ವಿದೇಶಗಳಿಂದ ತಂಡೋಪ ತಂಡವಾಗಿ ಭಕ್ತರು, ಪ್ರವಾಸಿಗರು ಶ್ರವಣಬೆಳಗೊಳಕ್ಕೆ ದಾಂಗುಡಿ ಇಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಂಧ್ಯಗಿರಿ, ಚಂದ್ರಗಿರಿ ಜನರಿಂದ ತುಂಬಿ ತುಳುಕುತ್ತಿವೆ. ಮುನ್ನೆಚ್ಚರಿಕೆ ಕ್ರಮವಾಗಿ ವಿಂಧ್ಯಗಿರಿ, ಬೆಳಗೊಳದಾದ್ಯಂತ ಭದ್ರತೆಗಾಗಿ ನಾಲ್ಕು ಸಾವಿರಕ್ಕೂ ಹೆಚ್ಚು ಪೊಲೀಸರನ್ನ ನಿಯೋಜಿಸಲಾಗಿದೆ.

ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಉತ್ಸವಕ್ಕೆ ಶ್ರವಣಬೆಳಗೊಳ ಸಕಲ ರೀತಿಯಲ್ಲೂ ಸಿಂಗಾರಗೊಂಡಿದೆ. ಇಡೀ ಊರ ತುಂಬೆಲ್ಲಾ ಬಾಹುಬಲಿಯ ಫ್ಲೆಕ್ಸ್ ಹಾಗೂ ಬಣ್ಣ ಬಣ್ಣದ ಧ್ವಜಗಳು ರಾರಾಜಿಸುತ್ತಿವೆ. ಭಕ್ತರು ಹಾಗೂ ಯಾತ್ರಾರ್ಥಿಗಳು ಸರದಿ ಸಾಲಿನಲ್ಲಿ ಸಾಗಿ ವಿಂಧ್ಯಗಿರಿ ಏರಲು ರಸ್ತೆ ಬದಿಯ ಪಕ್ಕದಲ್ಲಿ ಬ್ಯಾರಿಕೇಡ್ ಹಾಕಲಾಗಿದೆ.

ಶ್ರವಣಬೆಳಗೊಕ್ಕೆ ಸಂಪರ್ಕ ಕಲ್ಪಿಸುವ ಒಟ್ಟು 6 ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಬರುವ ಪ್ರತಿಯೊಬ್ಬರಿಗೂ ಅವರವರ ಅಭಿರುಚಿಗೆ ತಕ್ಕಂತೆ ಭೋಜನದ ವ್ಯವಸ್ಥೆಯನ್ನೂ ಮಾಡಲಾಗಿದೆ. ಇದೇ ಮೊದಲ ಬಾರಿಗೆ ನಿರ್ಮಿಸಿರುವ ಹೈಟೆಕ್ ಅಟ್ಟಣಿಗೆ ಏರಲು ಗಣ್ಯರಿಗೆ 2 ಮತ್ತು ಮಸ್ತಕಾಭಿಷೇಕ ಸಾಮಗ್ರಿ ಸಾಗಿಸಲು 3 ವಿಶೇಷ ಲಿಫ್ಟ್ ಅಳವಡಿಸಲಾಗಿದೆ.

Comments

Leave a Reply

Your email address will not be published. Required fields are marked *