-10 ರೂ.ಗೆ ಮೋದಿ, ಬಿಎಸ್‍ವೈ, ಅಮಿತ್ ಶಾ, ಪರಿಕ್ಕರ್ ಹರಾಜು ಹಾಕಿ ಆಕ್ರೋಶ
ಹುಬ್ಬಳ್ಳಿ: ಮಹದಾಯಿ ಹೋರಾಟದ ಹಿನ್ನೆಲೆಯಲ್ಲಿ ಇಂದು ಉತ್ತರ ಕರ್ನಾಟಕದಲ್ಲಿ ಬಂದ್ ಆಚರಿಸಲಾಗ್ತಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಪಕ್ಷದ ನಾಯಕರಿಗೆ ಒಳ್ಳೆ ಬುದ್ಧಿ ಬರಲೆಂದು ಹುಬ್ಬಳ್ಳಿಯಲ್ಲಿ ಹೋಮ ಹವನ ಮಾಡಿದ್ದಾರೆ.

ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಹೋರಾಟಗಾರು ಸಕಲ ವಿಧಿವಿಧಾನದ ಪ್ರಕಾರ ನಡುರಸ್ತೆಯಲ್ಲಿ ಹೋಮ ನೆರವೇರಿಸಿದ್ರು. ರಾಜಕೀಯ ಪಕ್ಷದ ನಾಯಕರು ರಾಜಕೀಯ ಬಿಟ್ಟು ನೀರು ಕೊಡಲು ಮುಂದಾಗಲಿ ಎಂದು ಹೋಮ ಹವನ ಮಾಡಿದ್ರು. ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮಧ್ಯಸ್ಥಿಕೆಗೆ ಒತ್ತಾಯಿಸಿದ ಪ್ರತಿಭಟನಾಕಾರರು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ರು.

ಪ್ರತಿಭಟನಾಕಾರರು ನರೇಂದ್ರ ಮೋದಿ, ಬಿಎಸ್‍ವೈ, ಅಮಿತ್ ಶಾ ಹಾಗೂ ಪರಿಕ್ಕರ್ ಅವರನ್ನು ಕೇವಲ ಹತ್ತು ರೂಪಾಯಿಗೆ ಹರಾಜು ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ರು. ಹುಬ್ಬಳ್ಳಿ ಹೊಸೂರಿನ ಬಳಿ ಕಾಂಕ್ರೀಟ್ ಮಿಕ್ಸರ್ ವಾಹನ ತಡೆದು ಪ್ರತಿಭಟನೆ ನಡೆಸಲಾಯ್ತು. ಲಾರಿ ಮೇಲೇರಿ ಮಹದಾಯಿ ಹೋರಾಟಗಾರರು ಘೋಷಣೆ ಕೂಗಿದ್ರು. ಪ್ರತಿಭಟನೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ- ಧಾರವಾಡ ಮಧ್ಯೆ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಕಾರಣ ಡಿಸಿಪಿ ರೇಣುಕಾ ಸುಕುಮಾರ ಸ್ಥಳಕ್ಕೆ ದೌಡಾಯಿಸಿ ಹೋರಾಟಗಾರರನ್ನು ನಿಯಂತ್ರಿಸುವ ಪ್ರಯತ್ನ ಮಾಡಿದ್ರು.

ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನಾಕಾರರು ಟಯರ್‍ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ರು. ಹುಬ್ಬಳ್ಳಿಯ ರೈಲು ನಿಲ್ದಾಣದ ಮುಂದೆ ಕನ್ನಡಪರ ಸಂಘನೆಗಳು ಹೋರಾಟ ನಡೆಸಿದವು. ರೈಲ್ವೆ ನಿಲ್ದಾಣದೆದರು ಸಂಗ್ರಾಮ ಸೇನೆಯಿಂದ ಪ್ರತಿಭಟನೆ ನಡೆಯಿತು. ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಹೊರಟಿದ್ದ ಹೋರಾಟಗಾರರಿಗೆ ಪೊಲೀಸರು ಅಡ್ಡಿಪಡಿಸಿದ್ರು.

ರಕ್ತ ಹರಿಸಿ ಪ್ರತಿಭಟನೆ: ರೈಲು ಬಂದ್ ಮಾಡಲು ಹೊರಟಿದ್ದ ಕರವೇ ಕಾರ್ಯಕರ್ತರ ಬಂಧನ ಖಂಡಿಸಿ ಹೋರಾಟಗಾರರು ಪೆÇಲೀಸ್ ವಾಹನದ ಮುಂದೆ ಕುಳಿದು ಪ್ರತಿಭಟನೆ ಮಾಡಿದ್ರು. ಈ ಮಧ್ಯೆ ಕೆಲವು ಹೋರಾಟಗಾರರು ಪೊಲೀಸರ ವರ್ತನೆ ಖಂಡಿಸಿ ಬ್ಲೇಡ್ ನಿಂದ ಕೈ ಕುಯ್ದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ರು. ರಕ್ತ ಚೆಲ್ಲುತ್ತೇವೆ, ಹೋರಾಟ ನಿಲ್ಲಿಸೋದಿಲ್ಲ ಎಂಬ ಘೋಷಣೆ ಕೂಗಿದ್ರು.

ಗಬ್ಬೂರು ಬಳಿಯ ಟೋಲ್ ಗೇಟ್‍ನಲ್ಲಿ ಜಯ ಕರ್ನಾಟಕ ಸಂಘಟನೆಯ ನೂರಾರು ಕಾರ್ಯಕರ್ತರು ಟೋಲ್ ಮೂಲಕ ಬರುತ್ತಿದ್ದ ವಾಹನಗಳನ್ನ ತಡೆದು ಪ್ರತಿಭಟನೆ ನಡೆಸಿದ್ರು ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಿಸಿದ ಹೋರಾಟಗಾರರು, ಮಾಲೀಕರಿಗೆ ಹೋರಾಟದಲ್ಲಿ ಭಾಗಿಯಾಗುವಂತೆ ಮನವಿ ಮಾಡಿದ್ರು. ಹೋಟೆಲ್ ಗೆ ಮುತ್ತಿಗೆ ಹಾಕಿ, ಹೋಟೆಲ್‍ನಲ್ಲಿದ್ದ ತಿಂಡಿ ತಿನಿಸುಗಳನ್ನ ಹೊರಗಿಟ್ಟು, ಅದೇ ತಿಂಡಿ ತಿನಿಸುಗಳನ್ನ ಸಾರ್ವಜನಿಕರಿಗೆ ಕೊಟ್ಟು ಆಕ್ರೋಶ ಹೊರಹಾಕಿದ್ರು. ನಗರದಲ್ಲಿ ವಾಹನಗಳು ತಡೆದು ಬಂದ್ ಸಹಕಾರ ನೀಡುವಂತೆ ಮನವಿ ಮಾಡಿದ್ರು.

ಮಹದಾಯಿ ಹೋರಾಟಕ್ಕೆ ಹಿರಿಯ ಸಾಹಿತಿ ಪಾಟೀಲ್ ಪುಟ್ಟಪ್ಪ ಸಾಥ್ ನೀಡಿದ್ದು, ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನಾಕಾರರ ಜೊತೆಯಲ್ಲಿ ಕುಳಿತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ರು. ಈ ವೇಳೆ ಮಾತನಾಡಿದ ಅವರು, ಯಾವ ಪಕ್ಷದ ನಾಯಕರು ಮಹದಾಯಿ ವಿವಾದ ಬಗೆಹರಿಸಲು ಸಾಧ್ಯವಿಲ್ಲ. ಕೇವಲ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಮಾತ್ರ ಸಾಧ್ಯ. ಕೂಡಲೇ ಮೋದಿ ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕು. ಕರ್ನಾಟಕ ಬೇರೆ ದೇಶದಲ್ಲಿ ಇಲ್ಲ. ನಮ್ಮ ರಾಜ್ಯ ಇದೇ ದೇಶದಲ್ಲಿ ಇದೆ. ಮಹದಾಯಿ ಸಮಸ್ಯೆ ಬಗೆಹರಿಸಿ ಅದರ ಶ್ರೇಯಸ್ಸು ಬೇಕಿದ್ದರೆ ಅವರೇ ತೆಗೆದುಕೊಳ್ಳಲಿ ಎಂದರು.

ಮಹದಾಯಿ ಬಂದ್ ಬಿಸಿ ಕಿಮ್ಸ್ ಆಸ್ಪತ್ರೆಗೂ ತಟ್ಟಿದೆ. ಹುಬ್ಬಳ್ಳಿ ನಗರ ಬೆಳಿಗ್ಗೆ 6 ಗಂಟೆಯಿಂದ ಬಂದ್ ಆಗಿರೋ ಪರಿಣಾಮ ಯಾವುದೇ ಬಸ್ ಇಲ್ಲದೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರ ಪರಿಣಾಮ ಆಸ್ಪತ್ರೆಯಿಂದ ಬಿಡುಗಡೆಯಾದ ರೋಗಿಗಳು ಮನೆ ಸೇರುವುದು ಹೇಗೆ ಎನ್ನುವ ಸ್ಥಿತಿ ಕಿಮ್ಸ್ ನಲ್ಲಿದೆ.


















Leave a Reply