ಮಳೆಗೆ ಹೆದರಿ ಸ್ವಂತ ಮನೆ ಬಿಟ್ಟು ಬಾಡಿಗೆ ಮನೆ ಸೇರುತ್ತಿರುವ ಕೊಡಗು ಸಂತ್ರಸ್ತರು

ಮಡಿಕೇರಿ: ಈ ಬಾರಿಯ ಮಳೆಯಿಂದಾಗಿ ಮತ್ತೆ ಮನೆಗಳಿಗೆ ಹಾನಿ ಆಗಬಹುದು ಎಂದು ಆತಂಕಕ್ಕೆ ಒಳಗಾಗಿರುವ ಮಂಜಿನ ನಗರಿ ಮಡಿಕೇರಿಯ ಕೆಲವು ಸಂತ್ರಸ್ತರು, ಅಪಾಯದ ಪರಿಸ್ಥಿತಿಯಲ್ಲಿರುವ ತಮ್ಮ ಸ್ವಂತ ಮನೆಗಳನ್ನು ಸ್ವಯಂ ಪ್ರೇರಿತರಾಗಿ ಖಾಲಿ ಮಾಡಿ ಬಾಡಿಗೆ ಮನೆಗೆ ತೆರಳುತ್ತಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಕಳೆದ ವರ್ಷ ಪ್ರಕೃತಿ ವಿಕೋಪ ಸಂಭವಿಸಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿತ್ತು. ಮಡಿಕೇರಿ ಸೇರಿದಂತೆ ಹಲವು ಗ್ರಾಮೀಣ ಭಾಗಗಳಲ್ಲಿ ಮನೆಗಳು ಕೊಚ್ಚಿ ಹೋಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಸಂತ್ರಸ್ತರಿಗೆ ಸರ್ಕಾರದಿಂದ ಮನೆ ನಿರ್ಮಾಣ ಕಾರ್ಯವು ನಡೆಯುತ್ತಿದೆ. ಆದರೆ ಮಡಿಕೇರಿ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಮನೆಗಳು ಈಗಲೂ ಅಪಾಯದ ಸ್ಥಿತಿಯಲ್ಲಿದೆ. ಈ ಬಾರಿಯ ಮಳೆಯಿಂದ ಮತ್ತೆ ಅನಾಹುತ ಸಂಭವಿಸಬಹುದೆಂದು ಮಳೆಗಾಲ ಆರಂಭಕ್ಕೆ ಒಂದು ತಿಂಗಳಿರುವ ಮೊದಲೇ ತಮ್ಮ ಮನೆಗಳಲ್ಲಿನ ವಸ್ತುಗಳನ್ನು ಕೊಂಡುಕೊಂಡು ಇತರೆ ಕಡೆ ಬಾಡಿಗೆ ಮನೆಗಳಲ್ಲಿ ವಾಸಿಸಲು ಜನರು ಮುಂದಾಗಿದ್ದಾರೆ.

ಮಡಿಕೇರಿಯ ಚಾಮುಂಡೇಶ್ವರಿ ನಗರ ಮತ್ತು ಇಂದಿರಾನಗರ ಬಡಾವಣೆಗಳಲ್ಲಿ ಕಳೆದ ಬಾರಿಯ ಪ್ರಕೃತಿ ವಿಕೋಪದಿಂದ ಮನೆಗಳು ಕುಸಿದು ಬಿದ್ದಿರುವ ಶೋಚನೀಯ ದೃಶ್ಯ ಇನ್ನೂ ಕಾಣಸಿಗುತ್ತಿದೆ. ಈ ಹಿಂದಿನ ಮಳೆಯಲ್ಲಿ ಸ್ವಲ್ಪ ಹಾನಿಗೊಳಗಾದ ಮನೆಯಲ್ಲಿ ವಾಸದಲ್ಲಿದ್ದ ಜನತೆ ಇದೀಗ ತಮ್ಮ ಸ್ಥಳದಿಂದ ಬೇರೆಡೆಗೆ ತೆರಳುತ್ತಿದ್ದಾರೆ. ಕೆಲವರು ಹುಟ್ಟಿ ಬೆಳೆದ ಮನೆಯನ್ನು ತೊರೆದು ಎಲ್ಲಿಗೆ ಹೋಗುವುದು ಎಂದು ಚಿಂತಿಸುತ್ತಿದ್ದಾರೆ.

ಚಾಮುಂಡೇಶ್ವರಿ ನಗರ ಹಾಗೂ ಇಂದಿರಾ ನಗರ ಬಡಾವಣೆಗಳಲ್ಲಿ ಜಲಪ್ರಳಯದ ಭೀಕರತೆಗೆ ಕೂಲಿ ಕಾರ್ಮಿಕರು, ಬಡಬಗ್ಗರು ಸಂಕಷ್ಟಕ್ಕೆ ಒಳಗಾಗಿದ್ದರು. ಸಂತ್ರಸ್ತರು ರೋಧಿಸುತ್ತಲೇ ಸಂತ್ರಸ್ತ ಕೇಂದ್ರಗಳಲ್ಲಿ ಆಸರೆ ಪಡೆದಿದ್ದರು. ಅಬ್ಬರಿಸಿ ಬೊಬ್ಬಿರಿದ ವರುಣನ ಆರ್ಭಟದ ಕುರುಹು, ಈ ಬಡಾವಣೆಗಳಲ್ಲಿ ಇಂದಿಗೂ ಇದೆ. ಬೆಂದ ಗಾಯಕ್ಕೆ ಉಪ್ಪು ಸುರಿದಂತೆ ಮತ್ತೆ ಇದೀಗ ಅದೇ ಮಳೆಗಾಳಿಯ ಆರ್ಭಟದ ಆತಂಕ ಕಣ್ಣೆದುರಿನಲ್ಲಿ ಕುಣಿದಾಡುತ್ತಿದೆ. ಬಾಡಿಗೆ ಮನೆಯಲ್ಲೋ, ನೆಂಟರಿಷ್ಟರ ಮನೆಯಲ್ಲೋ ಉಳಿದು ಹೋದವರಿಗೆ ಇನ್ನೂ ಆಸರೆ ಸಿಕ್ಕಿಲ್ಲ. ಅದೇ ಬಡಾವಣೆಯಲ್ಲಿ ಉಳಿದು ಹೋದವರಿಗೂ ಭದ್ರತೆಯಿಲ್ಲ. ಹೀಗಾಗಿ ಅನೇಕರು ತಮ್ಮ ನಿವಾಸಗಳನ್ನು ಸ್ಥಳಾಂತರಿಸುತ್ತಿದ್ದಾರೆ. ಮತ್ತೆ ಬಾಡಿಗೆ ಮನೆಗಳನ್ನು ಹುಡುಕುತ್ತಿದ್ದಾರೆ.

ಸರ್ಕಾರದಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಮನೆ ನಿರ್ಮಾಣವಾಗುತ್ತಿದ್ದರೂ ಎಲ್ಲಾ ಸಂತ್ರಸ್ತರಿಗೆ ಈ ಮಳೆಗಾಲದ ಆರಂಭದ ಮುನ್ನ ಮನೆ ನೀಡುವುದು ಕಷ್ಟ ಸಾಧ್ಯ. ಈ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಆದರೆ ಅಪಾಯದ ಸ್ಥಿತಿಯಲ್ಲಿರುವ ಮನೆಗಳಲ್ಲಿ ವಾಸಿಸುವವರ ಪರಿಸ್ಥಿತಿ ಮಾತ್ರ ಕೇಳುವವರಿಲ್ಲ. ಇದರಿಂದ ಕೆಲವು ಸಂತ್ರಸ್ತರು ತಮ್ಮ ಮನೆಯ ಸ್ಥಿತಿಯನ್ನು ಅರಿತು ಸ್ವಯಂ ಪ್ರೇರಿತವಾಗಿ ಖಾಲಿ ಮಾಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *