ಮಡಿಕೇರಿ: 7ನೇ ಬಾರಿ ವಿಚಾರಣೆಗೆ ಆಗಮಿಸಿದ ಶಂಕಿತ ನಕ್ಸಲ್ ನಾಯಕ ರೂಪೇಶ್, ಇಂದು ನ್ಯಾಯಾಲಯದಲ್ಲಿ ತನ್ನ ಪರವಾಗಿ ತಾನೇ ವಾದ ಮಾಡಿದ್ದಾನೆ.
2010ರಲ್ಲಿ ಕೊಡಗಿನ ಮುಂಡ್ರೋಟು ಅರಣ್ಯದಲ್ಲಿ ಕಾಣಿಸಿಕೊಂಡಿದ್ದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದರು. ಈ ಪ್ರಕರಣದ ಹಿನ್ನೆಲೆ ಇಂದು ಜೆಎಂಎಫ್‍ಸಿ ನ್ಯಾಯಾಲಯಕ್ಕೆ ರೂಪೇಶ್‍ನನ್ನು ಹಾಜರುಪಡಿಸಲಾಗಿತ್ತು.

ಈ ವೇಳೆ ಸಮಯ ಕೇಳಿ ಕೋರ್ಟ್ ಹಾಲ್‍ನಲ್ಲಿ ಕೇಸ್ ಬಗ್ಗೆ ಅಧ್ಯಯನ ಮಾಡಿದ ರೂಪೇಶ್, ಒಂದೂವರೆ ಗಂಟೆಗೂ ಅಧಿಕ ಕಾಲ ತನ್ನ ವಾದ ಮಂಡಿಸಿದ್ದಾನೆ. ಕೊಡಗು ಪ್ರಕರಣ ಮತ್ತು ಕೇರಳ ಪ್ರಕರಣದಲ್ಲಿ ಒಂದೇ ಸಮಯದಲ್ಲಿ ರೂಪೇಶ್ ಭಾಗಿಯಾಗಿದ್ದಾನೆ ಎಂದು ದಾಖಲು ಮಾಡಲಾಗಿತ್ತು. ಎರಡೂ ಕಡೆಗಳಲ್ಲಿ ಒಂದೇ ಸಮಯದಲ್ಲಿ ನಾನು ಇರಲು ಹೇಗೆ ಸಾಧ್ಯ ಎಂಬುದನ್ನು ಮುಂದಿಟ್ಟುಕೊಂಡು ಪ್ರಕರಣದ ನ್ಯೂನತೆ ಎತ್ತಿ ಹಿಡಿದ್ದಾನೆ. ಜೊತೆಗೆ ನಕ್ಸಲ್ ವಿಚಾರದಲ್ಲಿ ಸುಪ್ರಿಂ ಕೋರ್ಟ್ ನೀಡಿದ ತೀರ್ಪುಗಳ ಉಲ್ಲೇಖಿಸಿದ ರೂಪೇಶ್ ಪ್ರಕರಣದಿಂದ ನನ್ನನ್ನು ಕೈ ಬಿಡಬೇಕು ಎಂದು ವಾದಿಸಿದ್ದಾನೆ.

ರೂಪೇಶ್‍ನ ವಾದ ಆಲಿಸಿದ ಮಡಿಕೇರಿ ನ್ಯಾಯಾಧೀಶರಾದ ವೀರಪ್ಪ ವಿ ಮಲ್ಲಾಪುರ್ ವಿಚಾರಣೆಯನ್ನು ಜುಲೈ 23ಕ್ಕೆ ಮುಂದೂಡಿದರು ಮತ್ತು ಜುಲೈ 23ಕ್ಕೆ ಸರ್ಕಾರಿ ಅಭಿಯೋಜಕರಿಗೆ ವಾದ ಮಂಡಿಸಲು ಅವಕಾಶ ನೀಡಿದರು. ವಿಚಾರಣೆ ಮುಗಿಸಿದ ರೂಪೇಶ್ ನನ್ನು ಬಿಗಿ ಭದ್ರತೆಯಲ್ಲಿ ಕೇರಳಕ್ಕೆ ಕರೆದುಕೊಂಡು ಹೋಗಲಾಯಿತು.
ರೂಪೇಶ್ ಯಾರು?
ವೃತ್ತಿಯಲ್ಲಿ ಹೈಕೋರ್ಟ್ ವಕೀಲನಾದ ರೂಪೇಶ್ ಕೇರಳದ ಕೊಚ್ಚಿನ್ ಮೂಲದವನು. ಇವನ ತಂದೆ ಹೆಸರು ರಾಮಚಂದ್ರ. ತನ್ನದೇ ಆದ ನಕ್ಸಲ್ ತಂಡವನ್ನು ಕಟ್ಟಿಕೊಂಡು ಸರ್ಕಾರದ ವಿರುದ್ಧ ಹಾಗೂ ಮೇಲ್ವರ್ಗದ ವಿರುದ್ಧ ಹೋರಾಟ ಮಾಡಿಕೊಂಡು ಕರಪತ್ರ ಹಂಚುತ್ತಾ ಕಾಡಿನಲ್ಲಿ ಅಲೆಯುತ್ತಿದ್ದನು. 2013ರ ಮೇ ತಿಂಗಳಿನಲ್ಲಿ ರೂಪೇಶ್ ಭಾಗಮಂಡಲ ಕೆಲ ಪ್ರದೇಶ ಕಾಣಿಸಿಕೊಂಡಿದ್ದ. ಈ ಕಾರಣಕ್ಕೆ ಅವನ ಮೇಲೆ ಅಲ್ಲಿನ ಪೊಲೀಸರು ಸೆಕ್ಷನ್ 143, 144, 147, 342, 506, 149 ಐಪಿಸಿ ಸೆಕ್ಷನ್ 3 ಹಾಗೂ 25 ರಂತೆ ಭಾರತೀಯ ಬಂದೂಕು ಕಾಯ್ದೆ ಸೆಕ್ಷನ್ 20, 1967ರಂತೆ ಕಾನೂನು ಬಾಹಿರ ಚಟುವಟಿಕೆ ಪ್ರಕರಣ ದಾಖಲಿಸಿದ್ದರು.

ಆರೋಪಗಳೇನು?
2010ರಲ್ಲಿ ಕೊಡಗು ಜಿಲ್ಲೆಯ ಕಾಲೂರು ಎಂಬಲ್ಲಿ ರೂಪೇಶ್ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಮತ್ತು 2013ರಲ್ಲಿ ರೂಪೇಶ್ ನಾಯಕತ್ವದ ನಕ್ಸಲ್ ತಂಡ ಭಾಗಮಂಡಲ ಕೆಲ ಮನೆಗಳಿಗೆ ಭೇಟಿ ನೀಡಿ ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಮತ್ತು ಸರ್ಕಾರದ ವಿರುದ್ಧದ ಕರಪತ್ರವನ್ನು ಹಂಚಿದ್ದ ಎಂದು ಅಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದವು. ಈ ಪ್ರಕರಣ ಕುರಿತಂತೆ ಕಳೆದ 5 ವರ್ಷಗಳಿಂದ ವಿಚಾರಣೆ ನಡೆಯುತ್ತಿದೆ.

Leave a Reply