ಮನೆ ಕೆಲ್ಸದ ಜೊತೆ ಬಿಡುವಿನ ವೇಳೆ ಮಾಸ್ಕ್ ತಯಾರಿಸಿ ಬಡವರಿಗೆ ವಿತರಣೆ

ಮಡಿಕೇರಿ: ಕೊರೊನಾ ಬಗ್ಗೆ ಸರ್ಕಾರ ಎಷ್ಟೇ ಅರಿವು ಮೂಡಿಸುತ್ತಿದ್ದರೂ ಜನತೆ ಎಚ್ಚೆತ್ತುಕೊಳ್ಳತ್ತಿಲ್ಲ. ಹೊರಗೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಬಳಸುವಂತೆ ಮನವಿ ಮಾಡುತ್ತಿದ್ದರೂ ಅದರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.

ಇದೇ ಸಂದರ್ಭವನ್ನು ಬಂಡವಾಳ ಮಾಡಿಕೊಂಡ ಹಲವರು ತುರ್ತು ಅಗತ್ಯವಿರುವ ಮಾಸ್ಕ್ ಗಳನ್ನು ದುಬಾರಿ ಬೆಲೆಗೆ ಮಾರಿ ಜನರ ಜೇಬಿಗೆ ಕತ್ತರಿ ಹಾಕಲು ಹೊರಟಿದ್ದಾರೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಮಡಿಕೇರಿ ನಗರದ ಮುಳಿಯ ಲೇಔಟ್‍ನ ನಿವಾಸಿ ಗೌರಿಯವರು ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ತಾವೇ ಮಾಸ್ಕ್ ಹೊಲೆದು ಬಡವರಿಗೆ ಹಂಚುತ್ತಿದ್ದಾರೆ.

ಜೀವನ ನಡೆಸಲು ನಾಲ್ಕೈದು ಮನೆಗಳಲ್ಲಿ ಕೆಲಸ ಮಾಡಿಕೊಂಡು ಬಿಡುವಿನ ಸಮಯದಲ್ಲಿ ತಾವು ಇರುವ ಬಾಡಿಗೆ ಮನೆಯಲ್ಲೆ ಮಷಿನ್ ಮೂಲಕ ಗೌರಿ ಅವರೇ ಮಾಸ್ಕ್ ಹೊಲೆದು ಬಡವರಿಗೆ ಹಂಚುತ್ತಿದ್ದಾರೆ. ಜೊತೆಗೆ ಮನೆ ಕೆಲಸಕ್ಕೆ ಹೋಗುವ ಬಿಡುವಿನ ವೇಳೆಯಲ್ಲಿ ಮನೆ, ಮನೆಗಳಿಗೆ ತೆರಳಿ ಮಾಸ್ಕ್ ಹಂಚಿ ಬರುತ್ತಾರೆ. ಈ ವೇಳೆ ಜನರಿಗೆ ಕೊರೊನಾದಿಂದ ಪಾರಾಗುವಂತೆ ಮನವರಿಕೆ ಮಾಡಿ ಸಮಾಜ ಸೇವೆ ಕೂಡ ಮಾಡುತ್ತಿದ್ದಾರೆ.

ಈ ವಿಚಾರವಾಗಿ ಮಾತನಾಡಿರುವ ಗೌರಿಯವರು, ಔಷಧಿ ಅಂಗಡಿಯಲ್ಲಿ ಮಾಸ್ಕ್ ಹೆಚ್ಚಾಗಿ ಸಿಗುತ್ತಿಲ್ಲ ಬಡವರು ಹೋಗಿ ಕೇಳಿದರೆ ಸುಮಾರು 100, 50, 30 ಹೀಗೆಲ್ಲಾ ಹಣವನ್ನು ತೆಗೆದುಕೊಳ್ಳುತ್ತಾರೆ. ಮೊದಲೇ ಜನ ಸಮಾನ್ಯರು ಹಣವಿಲ್ಲದೆ ತುಂಬ ಕಷ್ಟದಲ್ಲಿ ಇದ್ದಾರೆ. ಹಾಗಾಗಿ ಈ ರೀತಿಯಲ್ಲಿ ಸೇವೆ ಮಾಡುತ್ತಿರುವುದು ಒಂದು ರೀತಿಯಲ್ಲಿ ಖುಷಿ ಹಾಗೂ ತೃಪ್ತಿ ತಂದಿದೆ ಎಂದು ತಾವು ಮಾಡುವ ಕೆಲಸದ ಬಗ್ಗೆ ಗೌರಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *