ಮಡಿಕೇರಿ: ಸದಾ ಒಂದಿಲ್ಲೊಂದು ವಿಶೇಷ ಸ್ಪರ್ಧೆಗಳಿಂದ ಗಮನಸೆಳೆಯುವ ಕೊಡಗಿನಲ್ಲಿ ಇಂದು ಡಾಗ್ ಶೋ ಎಲ್ಲರನ್ನು ರಂಜಿಸಿತು. ಹಲವು ಭಾಗಗಳಿಂದ ಆಗಮಿಸಿದ್ದ 22ಕ್ಕೂ ಹೆಚ್ಚು ತಳಿಗಳ 230 ಕ್ಕೂ ಹೆಚ್ಚು ಶ್ವಾನಗಳು ಪ್ರದರ್ಶನಗೊಂಡವು.
ಮುದ್ದು ಮುದ್ದಾಗಿ ಹೆಜ್ಜೆಯಿಡುತ್ತಾ ನಲಿದಾಡಿದ ಚಿಕ್ಕ ಚಿಕ್ಕ ನಾಯಿಮರಿಗಳೊಂದೆಡೆಯಾದರೆ, ನೋಡಿದ ಕೂಡಲೇ ಎದೆನಡುಗಿಸುವಂತಹ ದೈತ್ಯಾಕಾರದ ನಾಯಿಗಳು ಕೂಡ ಶೋನಲ್ಲಿ ಬಂದಿದ್ದು ಗಮನಸೆಳೆಯಿತು. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪಲಿನಲ್ಲಿ ನಡೆದ ಈ ಡಾಗ್ ಶೋ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಪೊಮೆರಿಯನ್, ಗೋಲ್ಡನ್ ರಿಟ್ರೈವರ್, ಕೋಕರ್ ಸ್ಪ್ಯಾನಿಯೆಲ್ ನಂತಹ ಮುದ್ದು ಮುದ್ದಾದ ನಾಯಿಗಳನ್ನು ನೋಡೋದೆ ಒಂದು ಚೆಂದ. ಲಕ ಲಕನೆ ಓಡಾಡುತ್ತಾ ನೆರೆದಿದ್ದವರನ್ನ ರಂಜಿಸಿದ ಸ್ವೀಟ್ ಶ್ವಾನಗಳು ಬಹುಮಾನಕ್ಕಾಗಿ ಪೈಪೋಟಿ ನಡೆಸಿದವು. ದೂರದೂರುಗಳಿಂದ ತಮ್ಮ ಮುದ್ದು ನಾಯಿಗಳನ್ನ ಸ್ಪರ್ಧೆಗಾಗಿ ಕರೆತಂದಿದ್ದ ಮಾಲೀಕರು ಕೂಡ ಖುಷಿ ಖುಷಿಯಿಂದ ಸ್ಪರ್ಧೆಯಲ್ಲಿ ಭಾಗವಹಿಸಿ ಎಂಜಾಯ್ ಮಾಡಿದರು.
ಮುಧೋಳ, ಗ್ರೇಟ್ ಡ್ಯಾನ್, ಸೇಂಟ್ ಬರ್ನಾಡ್, ಜರ್ಮನ್ ಶಫರ್ಡ್, ಲ್ಯಾಬ್ರೆಡಾರ್ ನಂತಹ ದೈತ್ಯಾಕಾರದ ಶ್ವಾನಗಳು ಕೂಡ ಸ್ಪರ್ಧೆಯಲ್ಲಿ ಬಾಗವಹಿಸಿದ್ದು ವಿಶೇಷವಾಗಿತ್ತು. ತಳಿಗಳ ಆಧಾರದಲ್ಲಿ ನಡೆದ ಪ್ರದರ್ಶನದಲ್ಲಿ ಪ್ರತಿ ತಳಿಗಳ ವಿಭಾಗದಲ್ಲಿಯೂ ಅತ್ಯುತ್ತಮ ಪ್ರದರ್ಶನ ನೀಡಿದ ಶ್ವಾನಗಳಿಗೆ ಬಹುಮಾನ ನೀಡಲಾಯಿತು.

Leave a Reply