ಕಾಂಗ್ರೆಸ್ ಸಭೆಯಲ್ಲಿ ಕೈ-ಕೈ ಮಿಲಾಯಿಸಿದ ಕಾರ್ಯಕರ್ತರು

ಮಡಿಕೇರಿ: ಪಕ್ಷ ಸಂಘಟನೆಗೆ ಕರೆಯಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಎದುರೇ ಪಕ್ಷದ ಕಾರ್ಯಕರ್ತರು ಕೈ ಕೈ ಮಿಲಾಯಿಸಿಕೊಂಡ ಘಟನೆ ಕೊಡಗು ಜಿಲ್ಲೆಯ ಕುಶಾಲಗರದಲ್ಲಿ ನಡೆದಿದೆ.

ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಕೆಪಿಸಿಸಿ ವೀಕ್ಷಕ ವೆಂಕಪ್ಪಗೌಡ ಉಪಸ್ಥಿತಿಯಲ್ಲಿ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಘಟಕದ ಸಭೆ ಆಯೋಜನೆಗೊಂಡಿತ್ತು. ಈ ವೇಳೆ ಕೆಲವರು ಬ್ಲಾಕ್ ಅಧ್ಯಕ್ಷ ಸ್ಥಾನವನ್ನು ಹೆಬ್ಬಾಲೆ ಮಂಜು ಎಂಬವರಿಗೆ ನೀಡಬೇಕೆಂದು ಆಗ್ರಹಿಸಿದ್ದರು.

ಈಗ ಅಧ್ಯಕ್ಷರಾಗಿರುವ ವಿ.ಪಿ. ಶಶಿಧರ್ ಅವರೇ ಮುಂದುವರಿಯಲಿ ಎಂದು ಶಶಿಧರ್ ಕಡೆಯವರು ಹೇಳುತ್ತಿದ್ದಂತೆ ಎರಡು ಗುಂಪಿನ ನಡುವೆ ಮಾತಿನ ಚಕಮಕಿ, ನೂಕಾಟ ತಳ್ಳಾಟ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಈ ವೇಳೆ ವೇದಿಕೆಯಲ್ಲಿದ್ದ ವೆಂಕಪ್ಪ ಗೌಡ ಹಾಗೂ ಇತರರು ಮೂಕ ಪ್ರೇಕ್ಷಕರಂತೆ ಕುಳಿತಿದ್ದರು. ಪರಿಸ್ಥಿತಿ ವಿಕೋಪಕ್ಕೆ ತೆರಳುತ್ತಿದ್ದಂತೆ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ತಮ್ಮ ಸ್ಥಾನ ತ್ಯಜಿಸುತ್ತಿರುವುದಾಗಿ ಘೋಷಿಸಿದರು.

ಪಕ್ಷ ದ್ರೋಹಿಗಳನ್ನು ಸಂಬಾಳಿಸಿಕೊಂಡು ಮುನ್ನಡೆಯಲು ಸಾಧ್ಯವಿಲ್ಲ. ಇಂಥ ಅವಮಾನವನ್ನು ಸಹಿಸಿಕೊಂಡು ಇರಲು ಸ್ವಾಭಿಮಾನ ಒಪ್ಪೋದಿಲ್ಲ. ಹೀಗಾಗಿ ಸ್ಥಾನ ತ್ಯಜಿಸುತ್ತಿದ್ದೇನೆ. ಯಾರನ್ನಾದರೂ ನೇಮಕ ಮಾಡಿಕೊಳ್ಳಿ ಎಂದು ಹೇಳಿ ವೇದಿಕೆಯಿಂದ ಹೊರ ನಡೆದರು. ಅವರ ಜತೆಗೆ ಬೆಂಬಲಿಗರು ಕೂಡ ಹೊರ ಹೋದರು.

Comments

Leave a Reply

Your email address will not be published. Required fields are marked *