ಒಂದೂವರೆ ವರ್ಷದಿಂದ 16ರ ಹುಡ್ಗಿಯ ಮೇಲೆ 6 ಜನರಿಂದ ನಿರಂತರ ಅತ್ಯಾಚಾರ

ಭೋಪಾಲ್: ಸುಮಾರು 16 ತಿಂಗಳಿಂದ 9ನೇ ತರಗತಿ ವಿದ್ಯಾರ್ಥಿನಿ ಮೇಲೆ ಆರು ಜನ ನಿರಂತರವಾಗಿ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.

50 ವರ್ಷದ ಕ್ಯಾಟರಿಂಗ್ ಕಾಂಟ್ರ್ಯಾಕ್ಟರ್, ಮಗ ಕಾನೂನು ವಿದ್ಯಾರ್ಥಿ ಹಾಗೂ ಇತರ ನಾಲ್ಕು ಜನ ಒಂದೂವರೆ ವರ್ಷಗಳಿಂದ ನಿರಂತರ ಅತ್ಯಾಚಾರ ನಡೆಸಿದ್ದಾರೆ ಎಂದು ವಿದ್ಯಾರ್ಥಿನಿ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಆರು ಮಂದಿ ಆರೋಪಿಗಳನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.

2018ರ ಮಾರ್ಚ್ ನಲ್ಲಿ 15 ವರ್ಷದ ವಿದ್ಯಾರ್ಥಿನಿ ಹಾಸ್ಟೆಲ್‍ನಲ್ಲಿದ್ದುಕೊಂಡು 9ನೇ ತರಗತಿ ಓದುತ್ತಿದ್ದಳು. ಬಳಿಕ ತನ್ನ ತಾಯಿ ಮರಣ ಹೊಂದಿದ್ದರಿಂದ ಶಾಲೆಯನ್ನು ಬಿಟ್ಟಿದ್ದಳು. ನಂತರ ವಾಣಿಜ್ಯ ಮಳಿಗೆಯಲ್ಲಿ ವಾಚ್‍ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ತನ್ನ ತಂದೆಯ ಬಳಿಯೇ ತಂಗಿ ಜೊತೆ ವಾಸಿಸುತ್ತಿದ್ದಳು.

ಬಾಲಕಿ ಮನೆಯಲ್ಲಿರುವುದನ್ನು ಕಂಡ ಪಕ್ಕದ ಮನೆಯ 50 ವರ್ಷದ ಕ್ಯಾಟರಿಂಗ್ ಕಾಂಟ್ರ್ಯಾಕ್ಟರ್, ಬಾಲಕಿಯ ತಂದೆ ಕೆಲಸಕ್ಕೆ ತೆರಳಿದಾಗ ತನ್ನ ಮನೆಗೆ ಬಂದು ಮಕ್ಕಳನ್ನು ನೋಡಿಕೋ ಸಂಬಳ ನೀಡುತ್ತೇನೆ ಎಂದು ಹೇಳಿದ್ದಾನೆ. ಬಾಲಕಿ ಕೂಡ, ಮನೆಯಲ್ಲಿದ್ದರೆ ಪ್ರಯೋಜನವಿಲ್ಲ ಕೆಲಸಕ್ಕೆ ಹೋದರೆ ಸಂಬಳ ಸಿಗುತ್ತದೆ ಎಂದು ಭಾವಿಸಿ ಅವರ ಮನೆಗೆ ಮಕ್ಕಳನ್ನು ನೋಡಿಕೊಳ್ಳುವ ಕೆಲಸಕ್ಕೆ ಹೋಗಲು ಪ್ರಾರಂಭಿಸಿದ್ದಾಳೆ.

ಕೆಲಸ ಮಾಡಲು ಮನೆಗೆ ಬಂದಾಗ ಆಕೆಗೆ ತನ್ನ ಮೊಬೈಲ್‍ನಲ್ಲಿ ಪೋರ್ನ್ ವಿಡಿಯೋ ತೋರಿಸಿ, ಅನೇಕ ಬಾರಿ ಅವಳ ಮೇಲೆ ಅತ್ಯಾಚಾರವೆಸಗಿದ್ದಾನೆ. ಕ್ಯಾಟರಿಂಗ್ ಕಾಂಟ್ರ್ಯಾಕ್ಟರ್ ಮಾತ್ರವಲ್ಲದೆ ಆತನ ಮಗನೂ ಸಹ ಈ ವಿಷಯವನ್ನು ಹೊರಗಡೆ ಬಹಿರಂಗ ಪಡಿಸದಂತೆ ಬೆದರಿಸಿ, ಹುಡುಗಿಯನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಂಡಿದ್ದಾನೆ.

ಅತ್ಯಾಚಾರದ ಕಿರುಕುಳ ತಾಳಲಾರದೆ ಹುಡುಗಿ ಕೆಲವು ವಾರಗಳ ನಂತರ ಶಾಲೆಯಲ್ಲಿ ಸ್ನೇಹಿತನಾಗಿದ್ದ 16 ವರ್ಷದ ಹುಡುಗನ ಸಹಾಯ ಪಡೆಯಲು, ತನ್ನ ಸ್ನೇಹಿತೆಯಿಂದ ಮೊಬೈಲ್ ಪಡೆದಿದ್ದಾಳೆ. ಆದರೆ ದುರಂತವೆಂದರೆ ಆತನೂ ಈಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದಾದ ಬಳಿಕ ಇತ್ತ ಸ್ನೇಹಿತೆ ಕೂಡ ಶಾಲಾ ಸ್ನೇಹಿತನೊಂದಿಗೆ ಸಂಬಂಧ ಇಟ್ಟುಕೊಂಡಿರುವುದಾಗಿ ತಂದೆಗೆ ಹೇಳುವುದಾಗಿ ಬೆದರಿಸಿದ್ದಾಳೆ. ಅಲ್ಲದೆ, ಸಹಾಯ ಮಾಡಬೇಕಿದ್ದ ಆಕೆಯ ಸಹೋದರ ಸಹ ಬಾಲಕಿ ಮೇಲೆ ಹಲ್ಲೆ ನಡೆಸಿದ್ದಾನೆ.

ಈ ವಿಷಯ ಪಕ್ಕದ ಮನೆಯ ಯುವಕನಿಗೆ ತಿಳಿದು, ಆತನೂ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಕೊನೆಯದಾಗಿ ವಿದ್ಯಾರ್ಥಿನಿ ತನ್ನ ತಂದೆಯ ಬಳಿ ಎಲ್ಲ ನೋವನ್ನು ಹೇಳಿಕೊಂಡಿದ್ದಾಳೆ. ನಂತರ ಅವಳ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ನೀಡುತ್ತಿದ್ದಂತೆ ಪೊಲೀಸರು 6 ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣದ ಕುರಿತು ಮಾಹಿತಿ ನೀಡಿದ ತುಕೋಗಂಜ್ ಪೊಲೀಸ್ ಠಾಣೆಯ ಇನ್ ಚಾರ್ಜ್ ತಹಝೀಬ್ ಖಜಿ, 50 ವರ್ಷದ ಕ್ಯಾಟರಿಂಗ್ ಕಾಂಟ್ರ್ಯಾಕ್ಟರ್, ಮಗ ಕಾನೂನು ವಿದ್ಯಾರ್ಥಿ ಹಾಗೂ 16 ಮತ್ತು 18 ವರ್ಷದ ವಿದ್ಯಾರ್ಥಿನಿಯ ಪಕ್ಕದ ಮನೆಯ ಯುವಕರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *